ಕರ್ನಾಟಕ

ಕುಮಾರಸ್ವಾಮಿ ಇಲ್ಲಿಯವರೆಗೂ ನಡೆದು ಬಂದ ದಾರಿ…

Pinterest LinkedIn Tumblr


ಬೆಂಗಳೂರು: ಅದೃಷ್ಟದ ರಾಜಕಾರಣಿ ಎಂದರೆ ಕರ್ನಾಟಕದ ಮಟ್ಟಿಗೆ ಅದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಇರಬೇಕು. ಮೊದಲ ಸಲ ಶಾಸಕರಾದಾಗಲೇ 2006ರಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿಯಿಂದ 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವರಿಗೆ ಇದೀಗ ಮತ್ತೊಮ್ಮೆ ಪವಾಡಸದೃಶ ರೀತಿಯಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

1998ರಲ್ಲಿ ಕನಕಪುರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಕುಮಾರಸ್ವಾಮಿ, 1999ರಲ್ಲಿ ಸಾತನೂರಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. ಆದರೆ 2004ರಲ್ಲಿ ರಾಮನಗರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 2006ರಲ್ಲಿ ಕಾಂಗ್ರೆಸ್ ಜತೆಗಿನ ಸಖ್ಯ ಮುರಿದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿ ಮುಖ್ಯಮಂತ್ರಿ ಹುದ್ದೆ ಏರಿದರು. 2006ರ ಫೆಬ್ರವರಿ 3ರಿಂದ 2007ರ ಅಕ್ಟೋಬರ್ 9ರವರೆಗೆ ರಾಜ್ಯದ 18ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಗ್ರಾಮವಾಸ್ತವ್ಯ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿತ್ತು.

ಸಾರಾಯಿ ನಿಷೇಧ: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಲಾಟರಿ ಹಾಗೂ ಸಾರಾಯಿ ನಿಷೇಧಿಸಿದ್ದರು. ಅವರೇ ಮೊದಲ ಬಾರಿಗೆ ರಾಜ್ಯದಲ್ಲಿ 25 ಸಾವಿರ ರೂ. ತನಕ ಸಾಲಮನ್ನಾ ಮಾಡಿ ಗಮನ ಸೆಳೆದಿದ್ದರು. ಆದರೆ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದೆ ವಚನಭ್ರಷ್ಟ ಎಂಬ ಅಪವಾದ ಎದುರಿಸಿ, ಸರ್ಕಾರ ಕಳೆದುಕೊಂಡರು. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆಗ ಕುಮಾರಸ್ವಾಮಿ ಗೆದ್ದರೂ ಜೆಡಿಎಸ್ ಸಂಪೂರ್ಣ ನೆಲಕಚ್ಚಿತ್ತು. 2013ರಲ್ಲಿ ಜೆಡಿಎಸ್ ಕೇವಲ 40 ಸ್ಥಾನ ಗಳಿಸಿತು. ಆರಂಭದ ಕೆಲ ತಿಂಗಳು ವಿರೋಧ ಪಕ್ಷದ ನಾಯಕರಾಗಿದ್ದ ಕುಮಾರಸ್ವಾಮಿ ನಂತರ ಸಂಖ್ಯಾಬಲ ಕೊರತೆಯಿಂದ ಬಿಜೆಪಿಗೆ ಪ್ರತಿಪಕ್ಷ ಸ್ಥಾನ ಬಿಟ್ಟುಕೊಟ್ಟರು. ಈ ಮಧ್ಯೆ 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಸೋತರು. ಈ ಬಾರಿ 38 ಸ್ಥಾನ ಗಳಿಸಿದರೂ ಕಾಂಗ್ರೆಸ್ಸೇ ಕುಮಾರಸ್ವಾಮಿ ಅವರನ್ನು ಸಿಎಂ ಆಗುವಂತೆ ಕೋರಿತು.

ಕುಮಾರಸ್ವಾಮಿ ಹಿನ್ನೆಲೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರ ಎನ್ನುವ ಬಲದೊಂದಿಗೆ ರಾಜಕೀಯಕ್ಕೆ ಕಾಲಿಟ್ಟರೂ ತಮ್ಮದೇ ವರ್ಚಸ್ಸು ಬೆಳೆಸಿಕೊಂಡು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಮಟ್ಟಿಗೆ ಬೆಳೆದ ಅವರು ಹುಟ್ಟಿದ್ದು, ಬಾಲ್ಯ ಕಳೆದಿದ್ದು ಎಲ್ಲವೂ ಹಾಸನ ಜಿಲ್ಲೆಯಲ್ಲೇ. ಡಿಸೆಂಬರ್ 16, 1959ರಂದು, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ದೇವೇಗೌಡ-ಚನ್ನಮ್ಮ ದಂಪತಿಯ 6 ಮಕ್ಕಳಲ್ಲಿ ಮೂರನೆಯವರಾಗಿ ಕುಮಾರಸ್ವಾಮಿ ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹೊಳೆನರಸೀಪುರದಲ್ಲೇ ಮುಗಿಸಿದ ಕುಮಾರಸ್ವಾಮಿ, 8ನೇ ತರಗತಿಗೆ ಹಾಸನದ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರವೇಶ ಪಡೆದರು. 9ನೇ ತರಗತಿ ಪೂರೈಸುವುದರೊಳಗೆ ದೇವೇಗೌಡರು ರಾಜ್ಯ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದರು. 1972ರ ಸುಮಾರಿಗೆ ರಾಜಕೀಯವಾಗಿ ಬಿಜಿಯಾದ್ದರಿಂದ ದೇವೇಗೌಡರು ಕುಟುಂಬವನ್ನು ಬೆಂಗಳೂರಿಗೆ ಸ್ಥಳಾಂತರಿಸಬೇಕಾಯಿತು. ಕುಮಾರಸ್ವಾಮಿ 10ನೇ ತರಗತಿಗೆ ಬೆಂಗಳೂರಿನ ಜಯನಗರದಲ್ಲಿನ ಶಾಲೆಗೆ ಸೇರಿದರು. ಉನ್ನತ ಶ್ರೇಣಿಯಲ್ಲಿ ಎಸ್​ಎಸ್​ಎಲ್​ಸಿ ಪಾಸು ಮಾಡಿ, ಜಯನಗರದ ವಿಜಯಾ ಕಾಲೇಜಿಗೆ ಪಿಯುಸಿ(ಪಿಸಿಎಂಬಿ)ಗೆ ಸೇರಿದರು. ಆದರೆ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದರು. ಅನಿತಾ-ಕುಮಾರ ಸ್ವಾಮಿ ದಂಪತಿಯ ಪುತ್ರ ನಿಖಿಲ್ ಚಲನಚಿತ್ರ ನಟನಾಗಿ ಗುರುತಿಸಿಕೊಂಡಿದ್ದು, ಚುನಾವಣೆ ಪ್ರಚಾರದಲ್ಲೂ ಸಕ್ರಿಯರಾಗಿದ್ದರು.

ಚಿತ್ರ ನಿರ್ಮಾಪಕ

ಚಿತ್ರ ನಿರ್ವಪಕ ಹಾಗೂ ವಿತರಕರಾಗಿಯೂ ಕುಮಾರಸ್ವಾಮಿ ಕೆಲಸ ಮಾಡಿದ್ದಾರೆ. ವಿಷ್ಣುವರ್ಧನ್ ಅಭಿಯನದ ‘ಸೂರ್ಯವಂಶ’, ಶ್ರೀ ಮುರಳಿ ಅಭಿನಯದ ‘ಚಂದ್ರ ಚಕೋರಿ’, ಶಿವರಾಜ್​ಕುಮಾರ್ ಅಭಿನಯದ ‘ಗಲಾಟೆ ಅಳಿಯಂದ್ರು’ ಹಾಗೂ ಪುತ್ರ ನಿಖಿಲ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ‘ಜಾಗ್ವಾರ್’ ಚಿತ್ರಗಳನ್ನು ಅನಿತಾ-ಕುಮಾರಸ್ವಾಮಿ ಮಾಲೀಕತ್ವದ ‘ಚೆನ್ನಾಂಬಿಕಾ ಫಿಲಂಸ್’ ಸಂಸ್ಥೆ ನಿರ್ವಿುಸಿದೆ.

Comments are closed.