ಬೆಂಗಳೂರು: ಸಂಪುಟ ರಚನೆ ಹಾಗೂ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ದೆಹಲಿಗೆ ತೆರಳಿದರು.
ಸಿದ್ದರಾಮಯ್ಯ ಅವರ ಜತೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ, ಡಿ.ಕೆ.ಶಿವಕುಮಾರ್ ಅವರೂ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.
ಜೆಡಿಎಸ್-ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಸಂಪುಟ ರಚನೆಯ ಕಸರತ್ತು ಆರಂಭವಾಗಿದ್ದು, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು? ಯಾರಿಗೆ ಯಾವ ಖಾತೆ ನೀಡಬೇಕು? ಮೈತ್ರಿ ಪಕ್ಷಕ್ಕೆ ಯಾವ ಇಲಾಖೆಗಳನ್ನು ನೀಡಬೇಕು ಎಂಬುದರ ಕುರಿತು ನಾಯಕರು ದೆಹಲಿಯಲ್ಲಿ ಹೈಕಮಾಂಡ್ನೊಂದಿಗೆ ಚರ್ಚಿಸಲಿದ್ದಾರೆ.
ಇನ್ನು, ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಇದೇ ವೇಳೆ ಚರ್ಚೆಯಾಗುವ ಸಾಧ್ಯಗಳಿವೆ ಎನ್ನಲಾಗಿದೆ. ವಿಧಾನಸಭೆಯಲ್ಲಿ ಗಳಿಸಿರುವ ಸ್ಥಾನಗಳ ಆಧಾರದಲ್ಲಿ ಕಾಂಗ್ರೆಸ್ಗೆ ಈ ಬಾರಿ 4 ಪರಿಷತ್ ಸ್ಥಾನಗಳು ಪ್ರಾಪ್ತವಾಗಿವೆ. ಅದಕ್ಕೆ, ವಿ.ಆರ್. ಸುದರ್ಶನ್, ರಾಮಚಂದ್ರಪ್ಪ, ನಾಗರಾಜ ಯಾಧವ್, ಹುಚ್ಚಪ್ಪ, ನಂಜಯನಮಠ, ಕಮಲಾಕ್ಷಿರಾಜಣ್ಣ, ರಾಣಿ ಸತೀಶ್, ಬ್ಯಾಡಗಿ ಶಿವಣ್ಣನವರ್, ನಿವೇದಿತಾ ಆಳ್ವಾ ಆಕಾಂಕ್ಷಿಗಳಾಗಿದ್ದಾರೆ.
ವಿಧಾನಸಭೆ ಸ್ಥಾನ ಗಳಿಕೆ ಆಧಾರದಲ್ಲಿ ಬಿಜೆಪಿ-5, ಕಾಂಗ್ರೆಸ್-4, ಜೆಡಿಎಸ್-2 ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಬಹುದಾಗಿದೆ.
Comments are closed.