ಕರ್ನಾಟಕ

ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿಯ ರಾಜ್ಯ ಬಂದ್​ಗೆ ರೈತ ಸಂಘಗಳ ಹಿಂದೇಟು?

Pinterest LinkedIn Tumblr


ಬೆಂಗಳೂರು: ಸಾಲಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿರುವ ಬಂದ್​ಗೆ ಬೆಂಬಲ ನೀಡದಿರಲು ರೈತ ಸಂಘಟನೆಗಳು ನಿರ್ಧರಿಸಿವೆ ಎಂದು ಬೆಂಗಳೂರಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್​ ಹೇಳಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರ ಸಂಘ ಬಂದ್​ಗೆ ಬೆಂಬಲ ನೀಡುವುದಿಲ್ಲ. ಅಲ್ಲದೆ ಹಲವು ರೈತ ಮುಖಂಡರೂ ಭಾಗವಹಿಸದೆ ಇರಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಯೂ ಎಂದಿನಂತೆ ಚಿಕಿತ್ಸೆ ಲಭ್ಯವಾಗಲಿದೆ. ಹೋಟೆಲ್​ ಮಾಲೀಕರೂ ಬಂದ್​ ಮಾಡದಿರಲು ನಿರ್ಧರಿಸಿದ್ದಾರೆ. ಪೆಟ್ರೋಲ್​ ಬಂಕ್​ಗಳು ಕಾರ್ಯನಿರ್ವಹಿಸಲಿವೆ. ಪೆಟ್ರೋಲ್​, ಡೀಸೆಲ್​ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ ಎಂದು ರಾಜ್ಯ ಪೆಟ್ರೋಲ್​ ಮಾಲೀಕರ ಸಂಘಗಳು ಸ್ಪಷ್ಟಪಡಿಸಿವೆ.

ಆಟೋ, ಟ್ಯಾಕ್ಸಿ ಸಂಚಾರವೂ ಎಂದಿನಂತೆ ಇರಲಿದೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ, ಮೆಟ್ರೋದಲ್ಲೂ ವ್ಯತ್ಯಯವಿಲ್ಲ. ಲಾರಿ ಮಾಲೀಕರೂ ಬಂದ್​ಗೆ ಒಲ್ಲೆ ಎಂದಿದ್ದಾರೆ.

ನಾಳೆ ಬಂದ್​ ಮಾಡುವವರಿಗೆ ನಗರ ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಬಂದ್​ಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಎಚ್ಚರಿಕೆಯಿಂದ ಇರಲು ಎಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ಎಲ್ಲೆಲ್ಲಿದೆ ಬೆಂಬಲ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಜಾನೆ 6ರಿಂದ ಸಂಜೆ 6ರವರೆಗೆ ರೈತ ಮೋರ್ಚಾ ನೇತೃತ್ವದಲ್ಲಿ ಬಂದ್​ ನಡೆಸಲಾಗುವುದು. ಆಟೋ, ಸಾರಿಗೆ, ಅಂಗಡಿ ಹೋಟೆಲ್, ಲಾರಿ ಸಂಘಗಳಿಗೆ ಬಂದ್​ಗೆ ಬೆಂಬಲ ನೀಡಲು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಬಂದ್​ ಮಾಡಲು ನಿಶ್ಚಯಿಸಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ್​ ಕಲಬುರುಗಿ ತಿಳಿಸಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಬಂದ್​ ನಡೆಸಲಿದ್ದು ಪ್ರಮುಖ ರೈತ ಸಂಘಟನೆಗಳು ಬೆಂಬಲ ನೀಡಲಿದ್ದಾರೆ ಎಂದಿದ್ದಾರೆ.

Comments are closed.