ಕರ್ನಾಟಕ

ರೈತರ ಸಾಲ ಮನ್ನಾಗೆ ಸಿದ್ಧತೆ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿಯಿಂದ ಅಧಿಕಾರಿಗಳ ಜತೆ ಚರ್ಚೆ

Pinterest LinkedIn Tumblr

ಬೆಂಗಳೂರು: ಮೈತ್ರಿ ಸರ್ಕಾರವಿದ್ದರೂ ರೈತರ ಸಾಲ ಮನ್ನಾ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದು, ಸಾಲ ಮನ್ನಾದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು.

ನಿನ್ನೆಯಷ್ಟೇ ರೈತರ ಸಾಲ ಮನ್ನಾ ಮಾಡಲು ತಾವು ಬದ್ಧ ಎಂದಿದ್ದ ಸಿಎಂ, ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ, ರೈತರ ಸಾಲಮನ್ನಾದಿಂದ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ಹೊರೆ, ಈ ಹೊರೆಯನ್ನು ಸರಿದೂಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಾಲಮನ್ನಾಕ್ಕೆ ಹಣ ಹೊಂದಿಸಲು ಯಾವುದಾದರು ಹೊಸ ತೆರಿಗೆ ವಿಧಿಸುವುದು, ಈಗಿರುವ ಕೆಲ ತೆರಿಗೆಗಳ ಏರಿಕೆ ಸಾಧ್ಯತೆಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಇಲಾಖೆಯ ಅಧಿಕಾರಿಗಳು, ರಾಜ್ಯದ ಆರ್ಥಿಕ ಸ್ಥಿತಿಗತಿಗಳನ್ನು ಮುಖ್ಯಮಂತ್ರಿಗಳ ಮುಂದೆ ತೆರೆದಿಟ್ಟಿದ್ದು, ಸರ್ಕಾರಿ ನೌಕರರಿಗೆ ಸಕಾಲಕ್ಕೆ ಸಂಬಳ ಹೊಂದಿಸಲು ಕಷ್ಟಪಡಬೇಕಾದ ಸಂಕಷ್ಟ ಸ್ಥಿತಿ ಇದೆ ಎಂದು ಆರ್ಥಿಕ ಸಂಕಷ್ಟದ ವಸ್ತುಸ್ಥಿತಿಯ ಬಗ್ಗೆ ವಿವರಿಸಿದರು ಎನ್ನಲಾಗಿದೆ.

ರೈತರ ರಾಷ್ಟ್ರೀಯ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳ ಎಲ್ಲಾ ಸಾಲ ಮನ್ನಾ ಮಾಡಲು ಕನಿಷ್ಠ 55 ಸಾವಿರ ಕೋಟಿ ರುಪಾಯಿ ಅಗತ್ಯವಿದ್ದು, ಈ ಹಣ ಕ್ರೋಢಿಕರಣ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ನೆರವಿನಿಂದ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ಎನ್ನುತ್ತಿದ್ದಾರೆ.

ಪ್ರತಿಪಕ್ಷ ಬಿಜೆಪಿ ಮತ್ತು ರೈತ ಸಂಘಟನೆಗಳು ಸಾಲಮನ್ನಾ ಮಾಡುವಂತೆ ಸಿಎಂ ಮೇಲೆ ಒತ್ತಡ ಹೇರುತ್ತಿವೆ. ಇವೆಲ್ಲವುಗಳ ನಡುವೆ ಕಾಂಗ್ರೆಸ್ ಪಕ್ಷವನ್ನು ಒಪ್ಪಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ತೀರ್ಮಾನ ಮಾಡುವರೆ ಎಂಬುದು ಈಗ ಕುತೂಹಲ ಮೂಡಿಸಿದೆ.

Comments are closed.