ಕರ್ನಾಟಕ

ಕುಮಾರಸ್ವಾಮಿಗೆ ಹಣಕಾಸು ಖಾತೆ ಕೊಡಲು ಕಾಂಗ್ರೆಸ್‌ನ ಸಮ್ಮತಿ?

Pinterest LinkedIn Tumblr


ಬೆಂಗಳೂರು: ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೇ ಇಟ್ಟುಕೊಳ್ಳುವ ಬಗ್ಗೆ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್‌ ಒಪ್ಪುವ ನಿರೀಕ್ಷೆಯಿದೆ. ಎರಡೂ ಪಕ್ಷಗಳ ನಡುವೆ ತೀವ್ರ ಹಗ್ಗ ಜಗ್ಗಾಟಕ್ಕೆ ಕಾರಣವಾಗಿರುವ ಹಣಕಾಸು ಖಾತೆ ಹಂಚಿಕೆ ಬಿಕ್ಕಟ್ಟು ಈ ಮೂಲಕ ತಿಳಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರದಲ್ಲಿ ಜೆಡಿಎಸ್‌ ಕೈ ಮೇಲಾಗಲು ಪಕ್ಷದ ವರಿಷ್ಠ ಎಚ್‌.ಡಿ ದೇವೇಗೌಡರು ತೆರೆಮರೆಯಲ್ಲಿ ಹೂಡಿದ ತಂತ್ರವೇ ಕಾರಣ ಎನ್ನಲಾಗುತ್ತಿದೆ. ಕಳೆದ ವಾರ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ತಮ್ಮ ತಂದೆ ಯಾವುದೇ ರೀತಿಯಲ್ಲೂ ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ ಎಂದಿದ್ದರು.

ಹಣಕಾಸು ಖಾತೆಯೊಂದೇ ವಿವಾದದ ವಿಷಯವಲ್ಲ; ಇತರ ಮಹತ್ವದ ಖಾತೆಗಳ ಹಂಚಿಕೆಯೂ ತೀರ್ಮಾನವಾಗಬೇಕಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಸಚಿವ ಸಂಪುಟ ರಚನೆಯಲ್ಲಿ ದೀರ್ಘಕಾಲ ಅತಂತ್ರ ಸ್ಥಿತಿ ಮುಂದುವರಿದರೆ ಅಧಿಕಾರದ ಕಚ್ಚಾಟ ನಡೆಯುತ್ತಿದೆ ಎಂಬ ಸಂದೇಶ ಜನತೆಗೆ ಹೋಗಬಹುದು ಎಂಬ ಆತಂಕದಿಂದ ಕಾಂಗ್ರೆಸ್‌ ಕೆಲವು ವಿಚಾರಗಳಲ್ಲಿ ಬಿಗಿ ನಿಲುವು ಸಡಿಲಿಸಲು ಮುಂದಾಗಿದೆ.

ಎರಡೂ ಪಕ್ಷಗಳ ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಉನ್ನತ ಮಟ್ಟದಲ್ಲೇ ನಡೆಯುತ್ತಿದ್ದು, ರಾಜ್ಯದ ಕಾಂಗ್ರೆಸ್‌ ನಾಯಕರ ಮಾತಿಗೆ ಹೆಚ್ಚಿನ ಮಹತ್ವ ಇಲ್ಲವಾಗಿದೆ.

ಇದೇ ವೇಳೆ, ಐದು ವರ್ಷಗಳ ಪೂರ್ಣ ಅವಧಿಗೆ ಜೆಡಿಎಸ್‌ ಬೆಂಬಲಿಸುವುದಾಗಿ ಭರವಸೆ ನೀಡಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

Comments are closed.