ಕರ್ನಾಟಕ

ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮ್ಮಿಶ್ರ ಸರಕಾರದ ಬಜೆಟ್‌ ಮಂಡನೆಗೆ ಶೀಘ್ರ ಸಿದ್ಧತೆ: ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು : ಮುಂದಿನ ಮೂರು ಅಥವಾ ನಾಲ್ಕು ದಿನಗಳೊಳಗೆ ರಾಜ್ಯದ ನೂತನ ಸಮ್ಮಿಶ್ರ ಸರಕಾರದ ಬಜೆಟ್‌ ಮಂಡನೆ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಿದ್ಧತೆಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯ ಆಯವ್ಯಯದ ಲೇಖಾನುದಾನ ಅವಧಿಯು ಜುಲೈ 31ಕ್ಕೆ ಮುಕ್ತಾಯವಾಗಲಿದೆ. ಅಷ್ಟರೊಳಗೆ ಹೊಸ ಬಜೆಟ್‌ ಮಂಡನೆಯಾಗಬೇಕಿದೆ. ಹಿಂದಿನ ಕಾಂಗ್ರೆಸ್‌ ಸರಕಾರ ತನ್ನಅಧಿಕಾರಾವಧಿಯಲ್ಲಿ ಘೋಷಿಸಿದ್ದ ಪ್ರಮುಖ ಯೋಜನೆಗಳನ್ನು ಮುಂದುವರಿಸುವ ಬಗ್ಗೆ ಮತ್ತು ನೂತನ ಸಮ್ಮಿಶ್ರ ಸರಕಾರದ ಹೊಸ ಯೋಜನೆಗಳ ಬಗ್ಗೆ ವಿಸ್ತೃತ ಚಿಂತನೆ ನಡೆಯಲಿದೆ ಎಂದು ಸಿಎಂ ಹೇಳಿದ್ದಾರೆ.

ಸಮ್ಮಿಶ್ರ ಸರಕಾರದ ದಲ್ಲಿ ಕೊಟ್ಟು ತೆಗೆದುಕೊಳ್ಳುವ ಸೌಹಾರ್ದದ ನೀತಿಯನ್ನು ಅನುಸರಿಸಬೇಕಾಗುತ್ತದೆ; ಆ ಪ್ರಕಾರ ಪರಸ್ಪರ ತಿಳಿವಳಿಕೆಯ ನೆಲೆಯಲ್ಲಿ ಖಾತೆಗಳು ಹಂಚಿಕೆಯಾಗಿವೆ. ಈ ನಿಟ್ಟಿನಲ್ಲಿ ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಹಮತವನ್ನು ಪಡೆಯಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಸುಪ್ರೀಂ ಕೋರ್ಟ್‌ ತೀರ್ಪಿಗೆ ಅನುಗುಣವಾಗಿ ಕೇಂದ್ರ ಸರಕಾರ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವನ್ನು ರಚಿಸಿದೆ. ಆ ಕುರಿತ ಗಜೆಟ್‌ ಅಧಿಸೂಚನೆ ಹೊರಡಿಸಲಾಗಿದೆ. ಅಂತೆಯೇ ರಾಜ್ಯಕ್ಕೆ ಆಗುವ ಅನುಕೂಲ ಅಥವಾ ಅನನುಕೂಲದ ಬಗ್ಗೆ ಕಾನೂನು ತಜ್ಞರೊಂದಿಗೆ ಮತ್ತು ಜಲಸಂಪನ್ಮೂಲ ಪರಿಣತರೊಂದಿಗೆ ಸಮಾಲೋಚಿಸಿ ಮುಂದಡಿ ಇಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

Comments are closed.