ಕಾರವಾರ: ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ ಎಂದು ಮನನೊಂದ ಯುಪಿಎಸ್‌ಸಿ ಅಭ್ಯರ್ಥಿ, ಕುಮಟಾದ ವರುಣ್ ಚಂದ್ರ (26) ದೆಹಲಿಯ ಪಹಾಡ್‌ಗಂಜ್‌ನಲ್ಲಿದ್ದ ತಮ್ಮ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಹಾಡ್‌ಗಂಜ್‌ನ ಪರೀಕ್ಷಾ ಕೇಂದ್ರವೊಂದರಲ್ಲಿ ಅವರು ಪರೀಕ್ಷೆ ಬರೆಯಬೇಕಿತ್ತು. ಆದರೆ, ಪರೀಕ್ಷಾ ಕೇಂದ್ರದ ಬಗ್ಗೆ ಗೊಂದಲವುಂಟಾಗಿ ಮತ್ತೊಂದು ಕೇಂದ್ರಕ್ಕೆ ತೆರಳಿದ್ದರು. ಅದು ತಾವು ಬರೆಯಬೇಕಿದ್ದ ಕೇಂದ್ರವಲ್ಲ ಎಂದು ಅರಿತು ಸರಿಯಾದ ಕೇಂದ್ರಕ್ಕೆ ಬಂದರು. ಆದರೆ, ಅಷ್ಟರಲ್ಲಿ ಪರೀಕ್ಷೆ ಆರಂಭವಾಗಿತ್ತು. ಕೊಠಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರು ನಿಯಮದ ಪ್ರಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಅಲ್ಲಿಂದ ತಮ್ಮ ಕೊಠಡಿಗೆ ವಾಪಸಾದ ವರುಣ್, ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು.
ಈ ಬಗ್ಗೆ ಅವರು ಬರೆದಿರುವ ಮರಣಪತ್ರ ಕೊಠಡಿಯಲ್ಲಿ ಸಿಕ್ಕಿದೆ. ರಾಜೇಂದರ್ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರುಣ್ ಅವರ ತಂದೆ ಸುಭಾಶ್ ಚಂದ್ರನ್ ವಿಜ್ಞಾನಿಯಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ಕುಮಟಾ ಶಾಖೆಯ ಮುಖ್ಯಸ್ಥರಾಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗೆ ಎರಡು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದ ವರುಣ್, ಮುಂಬೈನಲ್ಲಿ ಸೋಮವಾರ ಮತ್ತೊಂದು ಪರೀಕ್ಷೆ ಬರೆಯುವವರಿದ್ದರು. ಇದಕ್ಕಾಗಿ ದೆಹಲಿಯಿಂದ ಮುಂಬೈಗೆ ವಿಮಾನ ಟಿಕೆಟ್ ಕೂಡ ಬುಕ್ ಮಾಡಿಕೊಂಡಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
Comments are closed.