ಕರ್ನಾಟಕ

ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ: ತಪ್ಪಿಸಿಕೊಳ್ಳುತ್ತಿದ್ದ ರೌಡಿಗೆ ಗುಂಡೇಟು

Pinterest LinkedIn Tumblr


ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಬಂಧಿಸಲು ಹೋದ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ರೌಡಿಶೀಟರ್‌ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬ್ಯಾಡರಹಳ್ಳಿ ನಿವಾಸಿ ಶರವಣ ಅಲಿಯಾಸ್‌ ತರುಣ್‌(21) ಬಂಧಿತ.

ಆರೋಪಿಯ ಎಡಗಾಲಿಗೆ ಗುಂಡೇಟು ಬಿದ್ದಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶರವಣ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದ್ದು, ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಠಾಣೆಯಲ್ಲಿ ದರೋಡೆ, ಕಳ್ಳತನ, ಕೊಲೆ ಯತ್ನ ಸೇರಿ 7 ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ಶರವಣ ತನ್ನ ಸಹಚರರಾದ ನಂದೀಶ್‌, ಸುಮಂತ್‌, ಪ್ರದೀಪ್‌ ಮತ್ತು ಅಕ್ಷಯ್‌ ಜತೆ ಸೇರಿಕೊಂಡು ಮೇ 21ರಂದು ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಪಟ್ಟೆಗಾರ ಪಾಳ್ಯದ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ಪ್ರವೀಣ್‌ ಎಂಬುವರ ಮೇಲೆ ಹಲ್ಲೆ ನಡೆಸಿ 15 ಸಾವಿರ ಹಣ, ಮೊಬೈಲ್‌ ದರೋಡೆ ಮಾಡಿದ್ದರು.

ಅಲ್ಲದೆ, ಜೂ.2ರಂದು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರಿಂದ 3 ಲಕ್ಷ ರೂ. ದರೋಡೆ ಮಾಡಿದ್ದರು. ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌ ವಿಜಯನಗರ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಮುಂದಾಗಿದ್ದರು.

ಕಾರ್ಯಾಚರಣೆಗಳಿಂದ ವಿಶೇಷ ತಂಡ ಪ್ರದೀಪ್‌ ಮತ್ತು ಅಕ್ಷಯ್‌ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು. ಕೃತ್ಯದಲ್ಲಿ ರೌಡಿಶೀಟರ್‌ ಶರವಣ ಮತ್ತು ನಂದೀಶ್‌, ಸುಮಂತ್‌ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಶರವಣನ ಬೆನ್ನು ಬಿದ್ದಿದ್ದ ತಂಡ ಈತನ ಚಲನವಲನಗಳ ಬಗ್ಗೆ ನಿಗಾವಹಿಸಿತ್ತು.

ಕಳೆದ ಹತ್ತಾರು ದಿನಗಳಿಂದ ತಲೆಮರೆಸಿಕೊಂಡಿದ್ದ ಶರವಣ ತನ್ನ ಕೆಲ ಸಹಚರರ ಜತೆ ಸೋಮವಾರ ತಡರಾತ್ರಿ 12.30ರ ಸುಮಾರಿಗೆ ಆಟೋದಲ್ಲಿ ಸುಮನಹಳ್ಳಿ ರಿಂಗ್‌ ರಸ್ತೆ ಕಡೆಯಿಂದ ಕಾಮಾಕ್ಷಿಪಾಳ್ಯ ಪೇಟೆ ಚನ್ನಪ್ಪ ಇಂಡಸ್ಟ್ರಿಯಲ್‌ ಎಸ್ಟೇಟ್‌ ಹಿಂಭಾಗದ ಗುಡ್ಡೆ ಕಡೆ ಹೋಗುತ್ತಿದ್ದರು.

ಆರೋಪಿಗಳ ಹಿಂಬಾಲಿಸಿದ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್‌ ನಾಗೇಶ್‌, ಪೇದೆ ಶ್ರೀನಿವಾಸ್‌ಮೂರ್ತಿ ಮತ್ತು ಸಿಬ್ಬಂದಿ ಚನ್ನಪ್ಪ ಇಂಡಸ್ಟ್ರಿಯಲ್‌ ಎಸ್ಟೇಟ್‌ ಬಳಿ ಅಡ್ಡಗಟ್ಟಿದ್ದು, ಶರಣಾಗುವಂತೆ ಸೂಚಿಸಿದ್ದಾರೆ. ಆದರೆ, ಆರೋಪಿ ಏಕಾಏಕಿ ಪೇದೆ ಶ್ರೀನಿವಾಸ್‌ಮೂರ್ತಿ ಮೇಲೆ ಚಾಕುವಿನಿಂದ ಇರಿದು ಹಲ್ಲೆಗೆ ಯತ್ನಿಸಿದ್ದು, ಅವರ ಎಡಗೈಗೆ ಗಾಯವಾಗಿದೆ.

ಆಗ ಮತ್ತೂಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಆದರೂ ಹಲ್ಲೆಗೆ ಮುಂದಾದ ಶರವಣನ ಮೇಲೆ ಪಿಐ ನಾಗೇಶ್‌ ಗುಂಡು ಹಾರಿಸಿದ್ದಾರೆ. ಪರಿಣಾಮ ಆತನ ಎಡಗಾಲಿಗೆ ಗುಂಡು ತಗುಲಿದೆ. ಸದ್ಯ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.