ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ತನಿಖಾ ತಂಡದ ಮುಂದೆ ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದು, ಈ ಕುರಿತ 12 ಪುಟಗಳ ಹೇಳಿಕೆ ಮಾಧ್ಯಮವೊಂದಕ್ಕೆ ಲಭ್ಯವಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನವೀನ್, ಗೌರಿ ಹತ್ಯೆಯ ಬಳಿಕ ಸಾಹಿತಿ ಭಗವಾನ್ ಹತ್ಯೆಗೂ ಸಂಚು ರೂಪಿಸಿರುವ ಕುರಿತು ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.
ಸಾಹಿತಿ ಭಗವಾನ್ ಹತ್ಯೆಗೆ ಸಂಚು ರೂಪಿಸಿ ಮೈಸೂರಿನಲ್ಲಿ ಗನ್ ಕೂಡ ಖರೀದಿ ಮಾಡಿದ್ದನಂತೆ ನವೀನ್. ಈ ವೇಳೆ ಆತನ ಸಂಪರ್ಕಕ್ಕೆ ಬಂದ ಮಾಸ್ಟರ್ ಮೈಂಡ್ ಪ್ರವೀಣ್, ಹಿಂದೂ ಸಂಘದ ಕಾರ್ಯಕರ್ತ ಎಂದು ಹೇಳಿಕೊಂಡು ಕರೆ ಮಾಡಿ ನಿಮ್ಮ ನಂಬರ್ ಮೋಹನ್ ಗೌಡ ಎಂಬವರು ನೀಡಿದ್ದಾರೆ ಎಂದಿದ್ದ. ಈ ಬಗ್ಗೆ ಮೋಹನ್ ಗೌಡರಿಗೆ ವಿಚಾರಿಸಿದಾಗ ಮುಂದುವರೆಯಿರಿ ಎಂದು ಸೂಚಿಸಿದ್ದರು. ಕೆಲ ದಿನಗಳ ನಂತರ ಬೀರೂರಿಗೆ ಬಂದು ನನ್ನನ್ನು ಭೇಟಿಯಾಗಿದ್ದ ಪ್ರವೀಣ್, ಹಿಂದೂ ಧರ್ಮದ ರಕ್ಷಣೆಗೆ ಗನ್ ಹಾಗೂ ಬುಲೆಟ್ ಕೇಳಿದ್ದ.
ನಂತರ ಬೆಂಗಳೂರಿನ ವಿಜಯನಗರದ ಪಾರ್ಕ್‌ನಲ್ಲಿ ಪ್ರವೀಣ್ ಭೇಟಿಯಾಗಿ ಹಿಂದೂ ಧರ್ಮದ ಬಗ್ಗೆ ಗೌರಿ ಲಂಕೇಶ್ ಅವಹೇಳನಕಾರಿಯಾಗಿ ಮಾತನಾಡಿದ್ದು ಆಕೆಯನ್ನು ಮುಗಿಸಲು ತೀರ್ಮಾನಿಸಿದ್ದೇವೆ. ನಮ್ಮ ಹುಡುಗರು ರೆಡಿ ಇದ್ದಾರೆ ಗನ್ ಕೊಟ್ಟರೆ ಸಾಕು ಎಂದು ಪ್ರವೀಣ್ ಹೇಳಿದ್ದ. ಕಾನೂನಿಗೆ ವಿರುದ್ಧವಾದ ಕೆಲಸ ಆಗಿದ್ದರೂ ಗೌರಿ ಲಂಕೇಶ್ ಬಗ್ಗೆ ನನಗೂ ಕೋಪ ಇದ್ದುದ್ದರಿಂದ ಒಪ್ಪಿಕೊಂಡೆ ಎಂದು ನವೀನ್ ಹೇಳಿದ್ದಾನೆ.
ಗನ್ ಮತ್ತು ಬುಲೆಟ್ ಅರೆಂಜ್ ಮಾಡುವುದಾಗಿ ಒಪ್ಪಿಕೊಂಡ ನಂತರ ಪ್ರವೀಣ್ ಕಾಯಿನ್ ಬೂತ್‌ನಲ್ಲಿ ಕರೆ ಮಾಡುವುದಾಗಿ ತಿಳಿಸಿ ಅಲ್ಲಿಂದ ಹೊರಟಿದ್ದ. ಬುಲೆಟ್ ಬಗ್ಗೆ ವಿಚಾರಿಸಲು ಕಾಯಿನ್ ಬೂತ್ನಿಂದ ಕರೆ ಮಾಡುತ್ತಿದ್ದ ಪ್ರವೀಣ್. ಬುಲೆಟ್‌ಗಾಗಿ ನಾನು ಕೊಳ್ಳೇಗಾಲ, ಊಟಿಗಳಲ್ಲಿ ಪ್ರಯತ್ನಿಸಿದೆ ಆದರೂ ಸಾಧ್ಯವಾಗಲಿಲ್ಲ. 05,09,2017 ರಂದು ಟಿವಿ ಹಾಗೂ ಪತ್ರಿಕೆಯಲ್ಲಿ ಗೌರಿ ಲಂಕೇಶ್ ಕೊಲೆ ಬಗ್ಗೆ ತಿಳಿದುಕೊಂಡೆ. ರಮಾನಂದರ ಬಳಿ ಈ ವಿಷಯ ಹೇಳಿದಾಗ ಅವರು ನಕ್ಕು ಸುಮ್ಮನಾದರು.
2017 ರ ಅಕ್ಟೋಬರ್ ನಲ್ಲಿ ಪ್ರವೀಣ್ ಮಂಡ್ಯಕ್ಕೆ ಬಂದು ನನ್ನನ್ನು ಭೇಟಿ ಮಾಡಿದರು. ನಾನು ಗೌರಿ ಹತ್ಯೆ ಬಗ್ಗೆ ಮಾತು ಆರಂಭಿಸುತ್ತಿದ್ದಂತೆಯೇ, ಅಂದು ಕೊಂಡಂತೆ ಕೆಲಸ ಆಗಿದೆ ಎಂದ ಪ್ರವೀಣ್ ಹೇಳಿದರು ಎಂದು ನವೀನ್ ಎಸ್‌ಐಟಿ ಪೊಲೀಸರ ಮುಂದೆ ತಿಳಿಸಿದ್ದಾನೆ.
Comments are closed.