ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಚಿವ ಸ್ಥಾನ ವಂಚಿತ ಶಾಸಕರು ಹಿರಿಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅತೃಪ್ತ ಶಾಸಕರ ಅಸಮಾಧಾನವನ್ನು ಶಮನಗೊಳಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಾಪತ್ತೆಯಾಗಿದ್ದಾರೆ.
ವೇಣುಗೋಪಾಲ್ ಅವರು ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಸಹ ಆಗಮಿಸಿರಲಿಲ್ಲ. ಈಗ ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಲೂ ಸಹ ಅವರು ರಾಜ್ಯಕ್ಕೆ ಆಗಮಿಸುತ್ತಿಲ್ಲ. ನಿನ್ನೆ ಎಂ.ಬಿ. ಪಾಟೀಲ್ ಅವರ ಮನೆಯಲ್ಲಿ ನಡೆದ ಅತೃಪ್ತ ಶಾಸಕರ ಸಭೆಯಲ್ಲೂ ಸಹ ಶಾಸಕರು ವೇಣುಗೋಪಾಲ್ ಅವರ ವಿರುದ್ದ ಹರಿಹಾಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಬೆನ್ನಲ್ಲೇ ಪಕ್ಷದಲ್ಲಿ ತೀವ್ರಗೊಳ್ಳುತ್ತಿರುವ ಅಸಮಾಧಾನ ಶಾಂತಗೊಳಿಸಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಹಿರಿಯ ನಾಯಕರ ಸಭೆನಡೆಸಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಸಭೆಯಲ್ಲಿದ್ದರು. ಎಂ.ಬಿ.ಪಾಟೀಲರನ್ನು ಸಮಾಧಾನಪಡಿಸಲು ಸಚಿವ ಕೃಷ್ಣಬೈರೇಗೌಡ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ದಿನವಿಡೀ ಪ್ರಯತ್ನಿಸಿದ್ದರು.
Comments are closed.