ತುಮಕೂರು: ಕರ್ನಾಟಕದ ಸಚಿವನಾಗಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ನನಗೆ ವಿಷಾದವಿದೆ. ಕನ್ನಡ ಕಲಿಯದೇ ಇದ್ದದ್ದು ನನ್ನ ದುರಾದೃಷ್ಟ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕುರಿತು ಮಾತನಾಡಿದರು.
‘ನನ್ನ ತಂದೆ ತಾಯಿ ಬಾಲ್ಯದಲ್ಲಿ ಕನ್ನಡ ಶಾಲೆಗೆ ಸೇರಿಸಿರಲಿಲ್ಲ. ಇಂಗ್ಲಿಷ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದೆ. ಹೀಗಾಗಿ ಕನ್ನಡ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ತಪ್ಪುಗಳಾಗಬಾರದು ಎಂಬ ಕಾರಣಕ್ಕೆ ಇಂಗ್ಲಿಷ್‌ನಲ್ಲಿ ಸ್ವೀಕರಿಸಿದೆ. ಈ ಬಗ್ಗೆ ನಾಡಿನ ಜನರಲ್ಲಿ ಕ್ಷಮೆ ಕೋರುತ್ತೇನೆ. ನಾಡಿನ ಜನರಿಗೆ ಆದ ನೋವಿನ ದುಪ್ಪಟ್ಟು ನೋವು ನನಗಾಗಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಹೇಳಿದರು.
ಕನ್ನಡ ಬಿಟ್ಟು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಅಲ್ಲದೆ ವಿರೋಧ ಕೂಡ ವ್ಯಕ್ತವಾಗಿತ್ತು. ನನ್ನನ್ನು ರಾಜ್ಯದ್ರೋಹಿಯನ್ನಲಿ ಅಥವಾ ದೇಶದ್ರೋಹಿಯನ್ನಲಿ.. ಆದರೆ ನನ್ನ ತಪ್ಪಿನ ಬಗ್ಗೆ ಅರಿವಿದೆ. ಹೀಗಾಗಿ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು. ಅಂತೆಯೇ ‘ಸಚಿವ ಸ್ಥಾನ ನಿಭಾಯಿಸಿ ನನಗೆ ಅನುಭವವಿಲ್ಲ. ಈಗ ತಾನೇ ಸಚಿವನಾಗಿದ್ದೇನೆ. ಸ್ವಲ್ಪ ದಿನ ಕಾಲಾವಕಾಶ ಬೇಕು. ಬಳಿಕ ಖಾತೆಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಇದು ಮೈತ್ರಿ ಸರ್ಕಾರ, ದೇವೇಗೌಡರ ಸಲಹೆ ಪಡೆಯುವುದು ತಪ್ಪಿಲ್ಲ
ಇದೇ ವೇಳೆ ಸರ್ಕಾರದ ಸಂಪುಟ ರಚನೆ ಗೊಂದಲದ ಕುರಿತು ಮಾತನಾಡಿದ ಜಮೀರ್, ನಮ್ಮದು ಸಮ್ಮಿಶ್ರ ಸರ್ಕಾರ. ಇದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಡೆಯುವುದರಲ್ಲಿ ತಪ್ಪಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ದೇವೇಗೌಡರಾಗಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಹಸ್ತಕ್ಷೇಪ ಮಾಡಿಲ್ಲ ಎಂದರು. ಅಂತೆಯೇ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಗೊಂದಲ ಬಗೆ ಹರಿಯಲಿದೆ. ಎಂ.ಬಿ. ಪಾಟೀಲ್ ಅವರಿಗೆ ನೋವಾಗಿದೆ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆ. ಪಕ್ಷ ತೊರೆಯುವುದಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಜಮೀರ್ ತಿಳಿಸಿದರು.
Comments are closed.