ಬೆಂಗಳೂರು: ರಾಜಧಾನಿ ಬೆಂಗಳೂರು, ಹಾಸನ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಬೀದರ್ ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಅಬ್ಬರಿಸುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಅಲ್ಲದೆ, ಮುಂದಿನ ಐದು ದಿನಗಳು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ, ಮಲೆನಾಡು, ಕೊಡಗಿನ ಹಲವೆಡೆ ಉತ್ತಮ ಮಳೆಯಾಗಿದ್ದು, ತುಂಗಾ, ಭದ್ರಾ, ನೇತ್ರಾವತಿ, ಶರಾವತಿ, ಅಘನಾಶಿನಿ, ಕಾವೇರಿ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅಲ್ಲದೆ, ಭಾರೀ ಮಳೆಯಾಗಬಹುದು ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಆಧರಿಸಿ ಶನಿವಾರವೂ ಉಭಯ ಜಿಲ್ಲೆಗಳ ವ್ಯಾಪ್ತಿಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕುಂದಾಪುರ ತಾಲೂಕಿನ ಹಲವೆಡೆ ಮರಗಳು ಧರಾಶಾಹಿಯಾಗಿದ್ದು, ಹಲವೆಡೆ ಮನೆಗಳು ಹಾನಿಗೊಳಗಾಗಿವೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ರಸ್ತೆಗಳಲ್ಲಿ ನೀರು ತುಂಬಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬೈಂದೂರು ಬಳಿ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಕೊಂಡಿ ಒತ್ತಿನೆಣೆ ಗುಡ್ಡದ ತಳಭಾಗ ಬಿರುಕು ಬಿಟ್ಟಿದ್ದು, ಗುಡ್ಡ ಕುಸಿಯುವ ಅಪಾಯ ಎದುರಾಗಿದೆ.
ಮೂಡಿಗೆರೆ, ಶೃಂಗೇರಿ, ಕೊಪ್ಪ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು ಭಾಗದ ನದಿಗಳಾದ ತುಂಗಾ, ಭದ್ರಾದಲ್ಲಿ ನೀರಿನ ಮಟ್ಟ ಹೆಚ್ಚಿದೆ. ಹಳ್ಳ, ಕೊಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಬೀದರ್, ಗದಗ, ಗುಳೇದಗುಡ್ಡ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.
ಉಡುಪಿಯಲ್ಲಿ 210 ಮಿ.ಮೀ. ಮಳೆ
ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಉಡುಪಿಯ ಸಿದ್ದಾಪುರದಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಅತ್ಯಧಿಕ 210 ಮಿ.ಮೀ. ಮಳೆ ದಾಖಲಾಗಿದೆ. ಕೊಲ್ಲೂರಿನಲ್ಲಿ 180 ಮಿ.ಮೀ., ಶಿವಮೊಗ್ಗದ ಆಗುಂಬೆ 170, ಚಿಕ್ಕಮಗಳೂರಿನ ಕೊಟ್ಟಿಗೆಹಾರ 160, ಹೊನ್ನಾವರ 150, ದಕ್ಷಿಣ ಕನ್ನಡದ ಮುಲ್ಕಿ, ಮಾಣಿ, ಕಲಬುರಗಿಯ ಖಜೂರಿ ಮತ್ತು ಕೊಡಗಿನ ಭಾಗಮಂಡಲ 140, ಪಣಂಬೂರು ಹಾಗೂ ಪುತ್ತೂರು 130, ಸುಳ್ಯ, ಮೂಡಬಿದರೆ, ಗೇರುಸೊಪ್ಪ 120, ಧರ್ಮಸ್ಥಳ 110, ಆಳಂದ, ಮಡಿಕೇರಿ 100, ಸುಬ್ರಮಣ್ಯ, ಶೃಂಗೇರಿ 90, ಕುಮಟಾ, ತಾಳಗುಪ್ಪ 80, ನಾಪೋಕ್ಲು, ಲಿಂಗನಮಕ್ಕಿ, ಕಮ್ಮರಡಿ 70 ಮಿ.ಮೀ. ಮಳೆ ಆಗಿದೆ.
ಭಾರೀ ಮಳೆ ಮುನ್ಸೂಚನೆ:
ಮುಂಗಾರು ಮಾರುತಗಳು ರಾಜ್ಯಾದ್ಯಂತ ವ್ಯಾಪಿಸಿವೆ. ಈ ಮಧ್ಯೆ ಬಂಗಾಳ ಕೊಲ್ಲಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ವಾಯುಭಾರ ಕುಸಿತ ಕಂಡು ಬರಲಿದೆ. ಮುಂದಿನ 48 ಗಂಟೆಗಳಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚುವ ಲಕ್ಷಣಗಳಿವೆ. ಹಾಗಾಗಿ, ಜೂನ್ 12ರವರೆಗೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ಅರಬ್ಬಿ ಸಮುದ್ರದಲ್ಲಿ “ಕಡಿಮೆ ಒತ್ತಡದ ತಗ್ಗು’ (ಟ್ರಫ್) ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್. ಪಾಟೀಲ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉತ್ತರ ಒಳನಾಡಿನಲ್ಲಿ ಶನಿವಾರ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜೂನ್ 10 ಮತ್ತು 11ರಂದು ಬಹುಭಾಗಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದೆ. ದಕ್ಷಿಣ ಒಳನಾಡಿನ ಇದರ ಅಬ್ಬರ ಕಡಿಮೆ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ ಎಂದರು.
ಮುಂದಿನ ಐದು ದಿನಗಳಲ್ಲಿ ಕರಾವಳಿಯಲ್ಲಿ 70ರಿಂದ 130 ಮಿ.ಮೀ.ವರೆಗೂ ಹಾಗೂ ಆಯ್ದ ಭಾಗಗಳಲ್ಲಿ 240 ಮಿ.ಮೀ. ಮಳೆ ಆಗುವ ನಿರೀಕ್ಷೆ ಇದೆ. ಘಟ್ಟಪ್ರದೇಶಗಳಲ್ಲೂ ಭಾರಿ ಮಳೆ ಆಗಲಿದೆ. ಈಗಾಗಲೇ ಒಟ್ಟಾರೆ ರಾಜ್ಯದ ಶೇ. 75 ಭಾಗದಲ್ಲಿ ಮುಂಗಾರು ಮಳೆ ವ್ಯಾಪಿಸಿದೆ ಎಂದು ಸಿ.ಎಸ್. ಪಾಟೀಲ ತಿಳಿಸಿದರು.
Comments are closed.