ಬೆಂಗಳೂರು: ತಾನು ಕೆಲಸ ಮಾಡಿದ್ದ ಸಂಸ್ಥೆ ತನಗೆ ರಿಲೀವಿಂಗ್ ಲೆಟರ್ ನೀಡದ ಕಾರಣ ಬೇಸರಗೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆನೆಕಲ್ ಬಳಿ ನಡೆದಿದೆ.
ಆನೆಕಲ್ ಸಮೀಪ ಜಿಗಣಿಯಲ್ಲಿರುವ ಎವಿಡೆಂಟ್ ಲೇಸರ್ ಆಟೋ ಪ್ರೈ.ಲಿ. ನಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ ಕುಮಾರ್ ವಿಕೆ(24) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದು ಹೀಗೆ ನೇಣಿಗೆ ಶರಣಾಗುವ ಮುನ್ನ ತನ್ನ ಕುಟುಂಬಕ್ಕೆ ಪರಿಹಾರ ಧನ ನಿಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕರಿಗೆ ಮರಣ ಪತ್ರ (ಡೆತ್ ನೋಟ್) ಬರೆದಿಟ್ಟಿದ್ದಾನೆ.
ಚೆನ್ನಪಟ್ಟಣದ ಅರಳಾಲುಸಂದ್ರದ ನಿವಾಸಿಯಾಗಿದ್ದ ತೇಜಸ್ ಕಳೆದ ಎರಡು ವರ್ಷಗಳಿಂದ ಎವಿಡೆಂಟ್ ಲೇಸರ್ ಸಂಸ್ಥೆಯಲ್ಲಿ ಪ್ರೋಗ್ರಾಮರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದ ಈತ ತನ್ನ ಮೂವರು ಸ್ನೇಹಿತರೊಡನೆ ಇಂಡಸ್ಟ್ರಿಯಲ್ ಏರಿಯಾದ ಬಾಡಿಗೆ ಮನೆಯಲ್ಲಿ ವಾಸವಿದ್ದ.
ಮಧ್ಯಾಹ್ನದ ಸುಮಾರಿಗೆ ಈತನ ಸ್ನೇಹಿತರೆಲ್ಲಾ ಕೆಲಸಕ್ಕೆ ಹೋದಾಗ ತೇಜಸ್ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ವಿರುದ್ಧ ಆರೋಪಗಳನ್ನು ಮೊಬೈಲ್ ವಾಯ್ಸ್ ರೆಕಾರ್ಡ್ ಮೂಲಕ ದಾಖಲಿಸಿದ್ದಾನೆ. ಬಳಿಕ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಡೆತ್ ನೋಟ್ ನಲ್ಲಿ ತಿಳಿಸಿದಂತೆ ’ತಾನು ಈ ಕೆಲಸದಿಂದ ಸಂತೋಷವಾಗಿರಲಿಲ್ಲ.ಸಂಸ್ಥೆಯ ಅಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ. ಹಾಗಾಗಿ ನಾನು ಕೆಲಸ ಬದಲಾಯಿಸಲು ನಿರ್ಧರಿಸಿದೆ. ಎರಡು ವಾರದ ಹಿಂದೆ ಕೆಲಸ ಬದಲಾಯಿಸಿದಾಗ ಹೊಸ ಸಂಸ್ಥೆಯ ಅಧಿಕಾರಿಗಳು ಎವಿಡೆಂಟ್ ಲೇಸರ್ ಸಂಸ್ಥೆಯಿಂದ ರಿಲೀವಿಂಗ್ ಲೆಟರ್ ತರುವಂತೆ ಕೇಳಿದ್ದರು. ಆದರೆ ನಾನು ಎವಿಡೆಂಟ್ ಲೇಸರ್ ಗೆ ಈ ಬಗ್ಗೆ ಮನವಿ ಮಾಡಲು ಅವರು ರಿಲೀವಿಂಗ್ ಲೆಟರ್ ನೀಡಲು ನಿರಾಕರಿಸಿದ್ದಾರೆ.
ನಾನು ಪುನಃ ಪುನಃ ಅರಿಕೆ ಮಾಡಿಕೊಂಡರೂ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿಗಳು ನನಗೆ ರಿಲೀವಿಂಗ್ ಲೆಟರ್ ನೀಡಲು ನಿರಾಕರಿಸಿದ್ದರು. ಹೀಗಾಗಿ ಬೇಸರದಿಂದ ನಾನು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ಸಂಸ್ಥೆಯ ಆಡಳಿತವೇ ಕಾರಣ’ ಎಂದು ಬರೆದಿದ್ದಾನೆ.
ಇದರೊಡನೆ ತೇಜಸ್ ತಂದೆ ಕಾಂತರಾಜು ರೈತರಾಗಿದ್ದು ಅವರಿಗೆ ಮುಖ್ಯಮಂತ್ರಿಗಳು, ಸ್ಥಳೀಯ ಶಾಸಕರು ಪರಿಹಾರ ಧನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ಈ ಕುರಿತಂತೆ ಮಾತನಾಡಿದ ತೇಜಸ್ ತಂದೆ ಕಾಂತರಾಜು “ತೇಜಸ್ ಗೆ ಹಳೆ ಸಂಸ್ಥೆಯಲ್ಲಿ 12,000 ವೇತನ ಸಿಗುತ್ತಿತ್ತು. ಅವನು 6,000 ರೂ ನಮಗೆ ಕಳಿಸುತ್ತಿದ್ದ. ಈಗ ಎರಡು ವಾರಗಳ ಹಿಂದೆ ಅವನಿಗೆ ಹೊಸ ಕೆಲಸ ಸಿಕ್ಕಿತ್ತು. ಅಲಿ 17,000 ವೇತನದ ಭರವಸೆ ನೀಡಿದ್ದರು. ಆದರೆ ಹಳೆ ಸಂಸ್ಥೆಯ ಮಾಲೀಕರು ಮೋಹನ್ ರಾಜ್ ತೇಜಸ್ ಗೆ ರಿಲೀವಿಂಗ್ ಲೆಟರ್ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಹೊಸ ಸಂಸ್ಥೆಗೆ ಈ ಮೇಲೆ ಕಳಿಸಿ ತೇಜಸ್ ನನ್ನು ಸೇರಿಸಿಕೊಳ್ಳದಂತೆ, ಅವನ ವ್ಯಕ್ತಿತ್ವ ಸರಿ ಇಲ್ಲ ಎಂಬಂತೆಯೂ ಸುಳ್ಳು ಆರೋಪ ಮಾಡಿದ್ದಾರೆ. ಗುರುವಾರ ಸಂಜೆಯ ವೇಳೆ ತೇಜಸ್ ತನ್ನ ತಾಯಿ ಜತೆ ಮಾತನಾಡಿದ್ದು ಮೋಹನ್ ಮತ್ತು ಅವನ ಇಬ್ಬರು ಪುತ್ರರು ಅವನಿಗೆ ಹೇಗೆ ಕಿರುಕುಳ ನೀಡದರೆನ್ನುವುದನ್ನು ವಿವರಿಸಿದ್ದ. ಮೋಹನ್ ಗೆ ಕಠಿಣ ಶಿಕ್ಷೆಯಾಗಬೇಕು:” ಎಂದಿದ್ದಾರೆ.
ಏತನ್ಮಧ್ಯೆ ಆತ್ಮಹತ್ಯೆ ಘಟನೆಯ ನಂತರ ಸಂಸ್ಥೆಯನ್ನು ಲಾಕ್ ಮಾಡಿದ್ದು ಆರೋಪಿಗಳಾದ ಮೋಹನ್ ರಾಜ್ ಮತ್ತು ಅವರ ಪುತ್ರರು ತಲೆಮರೆಸಿಕೊಂಡಿದ್ದಾರೆ. ಘಟನೆ ಸಂಬಂಧ ಜಿಗಣಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.