ಕರ್ನಾಟಕ

ಚಾರ್ಮಾಡಿ: 9ಕ್ಕೂ ಹೆಚ್ಚು ಕಡೆಗಳಲ್ಲಿ ಭಾರೀ ಗುಡ್ಡ ಕುಸಿತ; ಏಕಮುಖ ಸಂಚಾರ

Pinterest LinkedIn Tumblr


ಬೆಳ್ತಂಗಡಿ: ಭಾರೀ ಮಳೆಯಿಂದಾಗಿ 9ಕ್ಕೂ ಹೆಚ್ಚು ಕಡೆಗಳಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿ ನಿನ್ನೆ ಸಂಜೆಯಿಂದ ಸಂಚಾರ ಸ್ಥಗಿತಗೊಂಡಿದ್ದ ಚಾರ್ಮಾಡಿ ಘಾಟ್‌ನಲ್ಲಿ ಮಂಗಳವಾರ ಮಧ್ಯಾಹ್ನದಿಂದ ಏಕಮುಖ ಸಂಚಾರ ಆರಂಭಗೊಂಡಿದೆ.

ಸೋಮವಾರ ಸಂಜೆಯಿಂದ ನೂರಾರು ವಾಹನಗಳು ಹಿಂದಕ್ಕೂ ಮುಂದಕ್ಕೂ ಚಲಿಸಲಾಗದೆ 500ಕ್ಕೂ ಹೆಚ್ಚು ಸವಾರರು ಆತಂಕದಲ್ಲಿ ರಾತ್ರಿಯೂ ರಸ್ತೆಯಲ್ಲೇ ಕಾಲ ಕಳೆದಿದ್ದರು.

4 ಕ್ಕೂ ಹೆಚ್ಚು ಜೆಸಿಬಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಏಕ ಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮಣ್ಣು ತೆರವು ಕಾರ್ಯಾಚರಣೆ ವೇಳೆ ಸ್ಥಳಕ್ಕೆ ಶಾಸಕ ಹರೀಶ್‌ ಪೂಂಜಾ ಅವರು ಆಗಮಿಸಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರು ಆಗಮಿಸಿ ಪರಿಶೀಲನೆ ನಡೆಸಿದರು.

2 ದಿನ ಬಂದ್‌
ರಸ್ತೆಯ ಸಂಪೂರ್ಣ ನಿರ್ವಹಣೆ, ಮರ ಗಳು ಮತ್ತು ಮಣ್ಣು ತೆರವು ಮಾಡಲು 2 ದಿನಗಳ ಕಾಲ ಘಾಟ್‌ನಲ್ಲಿ ಸಂಚಾರಕ್ಕೆ ತಡೆ ಹಾಕಲಾಗಿದೆ. ಶಾಸಕ ಹರೀಶ್‌ ಪೂಂಜಾ ಅವರು 2 ದಿನ ಗಳ ಬಂದ್‌ ಮಾಡಿ ಸಂಪೂರ್ಣ ತೆರವು ಕಾಮಗಾರಿ ನಡೆಸಲು ಸೂಚನೆ ನೀಡಿದರು. ಅಗತ್ಯ ಬಿದ್ದಲ್ಲಿ ಇನ್ನೊಂದು ದಿನ ಅಂದರೆ ಶುಕ್ರವಾರವೂ ಘಾಟ್‌ನಲ್ಲಿ ಸಂಚಾರ ತಡೆ ಹಿಡಿಯುವ ಸಾಧ್ಯತೆಗಳಿವೆ.

ಅಧಿಕಾರಿಗಳಿಗೆ ಸಿಎಂ ಸೂಚನೆ
ಸರ್ಕಾರದ ವತಿಯಿಂದ ಚಾರ್ಮಾಡಿ ಘಾಟ್‌ನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಳ್ತಂಗಡಿ ಕಡೆಯಿಂದ ಬೃಹತ್‌ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್‌ ಆಗಿದ್ದು, ವಾಹನ ಸವಾರರಿಗೆ ದಾರಿಯೇ ಇಲ್ಲದಂತಾಗಿತ್ತು.

ಕಾರುಗಳಲ್ಲಿದ್ದ ಪುಟ್ಟ ಮಕ್ಕಳು ಸೇರಿದಂತೆ ಹಿರಿಯ ವಯಸ್ಕರು ಆಹಾರ, ಔಷಧಿಗಳಿಲ್ಲದೆ ಪರದಾಡಬೇಕಾಯಿತು.

ಸಮಾಜ ಸೇವಕ ಹಕೀಂ ಅವರು ತುರ್ತು ಆಹಾರ ಮತ್ತು ಔಷಧವನ್ನು ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮೂಡಿಗೆರೆ ಮತ್ತು ಬೆಳ್ತಂಗಡಿ ಭಾಗದ ಪೊಲೀಸರು ರಸ್ತೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸ್ಥಳಕ್ಕೆ ತೆರಳಲು ಹರಸಾಹಸ ಪಡಬೇಕಾಯಿತು.

ಇನ್ನೂ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ವಾಹನದಲ್ಲಿರುವ ಸವಾರರು ಆತಂಕದಲ್ಲಿದ್ದಾರೆ.

ಬೃಹತ್‌ ಗುಡ್ಡ ಮರ ಸಮೇತ ಕಿತ್ತು ಪಿಕಪ್‌ ವಾಹನವೊಂದರ ಮೇಲೆ ಬಿದ್ದಿದ್ದು ಅದೃಷ್ಟವಷಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Comments are closed.