ಕರ್ನಾಟಕ

ಜೋಗ ಜಲಪಾತದ ಅಂದ ಇಮ್ಮಡಿಗೊಳಿಸಿದ ಮುಂಗಾರು!

Pinterest LinkedIn Tumblr


ಶಿವಮೊಗ್ಗ ಎಂದಾಕ್ಷಣ ಥಟ್‌ ಅಂತ ಹೊಳೆಯೋದು ಅಲ್ಲಿನ ಜೋಗ ಜಲಪಾತವೇ. ಸಾಯದ್ರೊಳಗೆ ಒಮ್ಮೆ ನೋಡು ಜೋಗದು ಗುಂಡಿ ಎಂಬ ಹಾಡಿನ ಸಾಲಿನಂತೆ ಈ ಬಾರಿಯ ಮುಂಗಾರು ಚುರುಕುಗೊಂಡು ಜೋಗ ಜಲಪಾತದ ಅಂದವನ್ನು ಇಮ್ಮಡಿಗೊಳಿಸುತ್ತಿದೆ.

ಸಾಮಾನ್ಯವಾಗಿ ಅಕ್ಟೋಬರ್‌ ನಿಂದ ಡಿಸೆಂಬರ್‌ ಅಂತ್ಯದವರೆಗೆ ಜಲಪಾತಕ್ಕೆ ಭೇಟಿ ನೀಡಲು ಸೂಕ್ತ ಸಮಯ ಎನ್ನಲಾಗುತ್ತದೆ. ಆದರೆ ಈ ಬಾರಿ ಜೂನ್‌ ತಿಂಗಳಲ್ಲೂ ಜೋಗ ಪ್ರವಾಸಿಗರ ಮನದಲ್ಲಿ ಅಚ್ಚಳಿಯದೆ ಉಳಿವ ಪರಿಸರ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಜಲಪಾತದ ಬಳಿ ತೆರಳಲು ಅವಕಾಶ ಇರದು. ಅಂತೆಯೇ ಅಧಿಕ ಮಳೆ ಬಂದರೆ ಕೆಳಕ್ಕಿಳಿಯುವುದಕ್ಕೂ ಅನುಮತಿ ಇಲ್ಲ. ರಾಜ ರಾಣಿ, ರೋರರ್‌ ರಾಕೆಟ್‌ ಎಂಬ ಮೂರು ಕವಲುಗಳಾಗಿ ಶರಾವತಿ ನದಿ ಅಂದಾಜು 250 ಮೀ ಕೆಳಕ್ಕೆ ಧುಮುಕುವ ಪರಿ ನೋಡಲು ಮಳೆಗಾಲವೇ ಸೂಕ್ತ ಸಮಯ.

ಮಳೆಗಾಲದಲ್ಲಿ ಒಮ್ಮೆ ನೋಡಿ… ಜೋಗದ ಗುಂಡಿ

ಅಧಿಕ ಮಳೆಯಾದರೆ ಶರಾವತಿ ನದಿಯ ರಭಸಕ್ಕೆ ಜೋಗ ಮೈದುಂಬಿ ಹರಿಯುವ ಪರಿ ವರ್ಣನಾತೀತ. ನಾಲ್ಕು ಕವಲುಗಳಲ್ಲದೆ, ಜೋಗದ ಎಲ್ಲ ಭಾಗದಿಂದಲೂ ನೀರು ಪ್ರಪಾತಕ್ಕೆ ಬೀಳುವ ದೃಶ್ಯ ರುದ್ರರಮಣೀಯಕ್ಕೆ ಸಮ. ಶರಾವತಿ ನದಿಯ ರೌದ್ರ ನರ್ತನ ಎಂದರೂ ಅತಿಶಯೋಕ್ತಿಯಾಗಲಾರದು. ಪ್ರವಾಸಿ ತಾಣಗಳು. ಅದರಲ್ಲೂ ಆಗುಂಬೆ ಘಾಟಿ, ಹಚ್ಚ ಹಸಿರ ಕಾನನದ ಹಾದಿ, ವಿಶ್ವ ಪ್ರಸಿದ್ಧ ಜೋಗ ಜಲಪಾತ.

ಸಾಗರದಲ್ಲಿದೆ ಜೋಗ ಜಲಪಾತ

ಜೋಗ ಜಲಪಾತ ಶಿವಮೊಗ್ಗದಿಂದ ಕೊಂಚ ದೂರದಲ್ಲಿದೆ ಎಂದಲ್ಲ. ಶಿವಮೊಗ್ಗ ಜಿಲ್ಲೆಯಿಂದ ಬರೋಬ್ಬರಿ 100 ಕಿ.ಮೀ ದೂರದಲ್ಲಿದೆ. ಸಾಗರ ತಾಲೂಕಿನ ತಾಳಗೊಪ್ಪದಿಂದ ಅಂದಾಜು 16 ಕಿ.ಮೀ ಕ್ರಮಿಸಬೇಕು. ಸಿಂಗಲ್‌ ರಸ್ತೆಯಲ್ಲಿ ಸ್ವಂತ ವಾಹನದಲ್ಲಿ ತೆರಳುವುದು ಕಷ್ಟಕರವೇನಲ್ಲ. ಸಾರ್ವಜನಿಕ ಸಂಚಾರ ವ್ಯವಸ್ಥೆಯೂ ಉತ್ತಮವಾಗಿದ್ದು, ಶಿವಮೊಗ್ಗದಿಂದ ಸಾಗರ, ಜೋಗ ಜಲಪಾತಕ್ಕೆ ಸರಕಾರಿ ಹಾಗೂ ಖಾಸಗಿ ಬಸ್ಸುಗಳ ವ್ಯವಸ್ಥೆ ಅನುಕೂಲಕರವಾಗಿದೆ.

ಪ್ಲಾನಿಂಗ್‌ ಸರಿಯಾಗಿರಲಿ
ಬೆಂಗಳೂರಿಗರಿಗೆ ಪ್ರಯಾಣ ಸುಲಭ. ತಡರಾತ್ರಿವರೆಗೂ ಶಿವಮೊಗ್ಗಕ್ಕೆ ಬಸ್‌ ಸೇವೆ ಲಭ್ಯವಿದೆ. ಬೆಳಗ್ಗೆ 8ರ ಸುಮಾರಿಗೆ ಶಿವಮೊಗ್ಗ ತಲುಪಿದರೆ, ನಗರದಲ್ಲಿರುವ ಕೆಲ ತಾಣಗಳಿಗೆ ಭೇಟಿ ನೀಡಬಹುದು. ಆದರೆ ಜೋಗಕ್ಕೆ ಸಾಗುವ ಬಸ್ಸುಗಳ ವಿವರ ಕೇಳಿದ ಬಳಿಕ ಬೇರೆ ಸ್ಥಳಗಳ ಭೇಟಿಗೆ ಯೋಜನೆ ಹಾಕಿಕೊಳ್ಳುವುದು ಸೂಕ್ತ.

ಸಾಗರಕ್ಕೆ ತಲುಪಿದ ತಕ್ಷಣ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳಲು ಖಾಸಗಿ ಬಸ್‌, ವಾಹನಗಳು ಸಹಕರಿಸುತ್ತವೆ. ಜಲಪಾತದ ಸುತ್ತಮುತ್ತ ತಿಂಡಿ, ಆಹಾರಕ್ಕೆ ಏನೂ ಕೊರತೆ ಇಲ್ಲ. ರಾಜ್ಯದ ಪ್ರಮುಖ ಪ್ರವಾಸಿ ಕ್ಷೇತ್ರದಲ್ಲಿ ಸೌಕರ್ಯಕ್ಕೆ ಕೊರತೆ ಇಲ್ಲ ಎನ್ನಬಹುದು. ಆದರೂ ನಿಮ್ಮ ಬಳಿ ನೀರು, ಒಂದಿಷ್ಟು ಸ್ನಾಕ್ಸ್‌ಗಳು ಜಲಪಾತದ ಜಾಗ ತಲುಪುವ ಮುನ್ನವೇ ಇರುವುದು ಒಳಿತು.

ವಾಪಾಸು ಸಾಗುವ ವೇಳೆ, ತಾಳಗೊಪ್ಪದಿಂದ ಬೆಂಗಳೂರಿಗೆ ಇರುವ ನೇರ ರೈಲು ಇನ್ನಷ್ಟು ಪ್ರಯೋಜನಕಾರಿ. ಸ್ವಂತ ವಾಹದಲ್ಲಿ ಬಂದವರು, ಶಿವಮೊಗ್ಗದ ಆಸುಪಾಸಿನಲ್ಲಿ ಕಾಣಸಿಗುವ ಚಂದ್ರಗುತ್ತಿ “ಶ್ರೀ ರೇಣುಕಾಂಬ ದೇವಸ್ಥಾನ” ಮತ್ತು ಕೋಟೆ, ಶಿವಪ್ಪನಾಯಕನ ಕೋಟೆ , ಕವಲೇದುರ್ಗದ ಕೋಟೆಗೆ ಭೇಟಿ ನೀಡಬಹುದು. ದಾರಿ ಮತ್ತು ಪ್ರಯಾಣ ಸಮಯವನ್ನು ಮುನ್ನವೇ ತಿಳಿದುಕೊಳ್ಳುವುದು ಸೂಕ್ತ.

Comments are closed.