ಕರ್ನಾಟಕ

4 ವರ್ಷದ ನಂತರ ನಿರಂತರ ಮಳೆ: ಜಲಾಶಯಗಳಿಗೆ ಹರಿದು ಬರುತ್ತಿರುವ ಜಲಧಾರೆ

Pinterest LinkedIn Tumblr


ಬೆಂಗಳೂರು: ನಾಲ್ಕೈದು ವರ್ಷಗಳಿಂದ ಸಮರ್ಪಕ ಮಳೆಯಾಗದೆ ಬರಡಾಗಿದ್ದ ರಾಜ್ಯಕ್ಕೆ ಈ ವರ್ಷ ಮುಂಗಾರು ಆರಂಭದಲ್ಲೇ ವರುಣನ ಕೃಪೆಯಾಗಿದ್ದು, ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳು ಕಳೆಗಟ್ಟತೊಡಗಿವೆ.

ಕಾವೇರಿ ಹಾಗೂ ಕಬಿನಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆ.ಆರ್.ಸಾಗರ ಸೇರಿ ಕಾವೇರಿ ಕಣಿವೆ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದೆ. ಕೆಆರ್​ಎಸ್ ಒಳಹರಿವು ಹೆಚ್ಚಿದ್ದು, ಕೇವಲ 2 ದಿನಗಳಲ್ಲಿ 2 ಅಡಿ ನೀರು ಹೆಚ್ಚಳವಾಗಿದೆ. 2009ರ ನಂತರ ಜೂನ್ ಮೊದಲ ವಾರದಲ್ಲಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 80 ಅಡಿ ತಲುಪಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 67.56 ಅಡಿ ಇತ್ತು. ಕಬಿನಿ ಜಲಾಶಯ ನೀರಿನ ಮಟ್ಟ 9.75 ಅಡಿ, ಹಾರಂಗಿ 17 ಅಡಿ, ಹೇಮಾವತಿ ಜಲಾಶಯದಲ್ಲಿ 4 ಅಡಿ ಏರಿಕೆ ಕಂಡಿದೆ. ಉತ್ತಮ ಒಳಹರಿವಿದ್ದು, ಇದೇ ರೀತಿ ಮುಂದುವರಿದಲ್ಲಿ ಒಂದು ವಾರದಲ್ಲಿ ಕಬಿನಿ, ಹಾರಂಗಿ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ. ಕಾವೇರಿ, ಲಕ್ಷ್ಮಣತೀರ್ಥ, ಬರಪೊಳೆ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.

ನೀರಿಗೆ ಸಮಸ್ಯೆ

ರಾಜ್ಯದ 284 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಆರ್.ವಿ.ದೇಶಪಾಂಡೆ ವಿವರಿಸಿದರು. ಹಾಸನ (33 ಗ್ರಾಮ), ಮಂಡ್ಯ (26), ದಾವಣಗೆರೆ (13), ತುಮಕೂರು (10), ಉತ್ತರ ಕನ್ನಡ(16) ವಿಜಯಪುರ(22) ಸೇರಿ ವಿವಿಧ ಜಿಲ್ಲೆಗಳಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ 1200 ಹಳ್ಳಿಗಳಲ್ಲಿ ನೀರಿನ ಅಭಾವ ಇತ್ತೆಂದರು.

ತುಂಬಿ ಹರಿಯುತ್ತಿರುವ ತುಂಗೆ, ಭದ್ರೆ

ಮಲೆನಾಡಿನಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿರುವುದರಿಂದ ಎಲ್ಲ ಹೊಳೆಗಳು ಮೈದುಂಬಿಕೊಂಡಿವೆ. ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ವರ್ಷಧಾರೆಯಾಗಿದ್ದು, ಆಗುಂಬೆಯಲ್ಲಿ 128.1 ಮಿಮೀ ಮಳೆ ದಾಖಲಾಗಿದೆ. ಲಿಂಗನಮಕ್ಕಿ ಅಣೆಕಟ್ಟೆಗೆ 14,735 ಕ್ಯೂಸೆಕ್ ನೀರು ಬರುತ್ತಿದ್ದು, ಒಂದೂಕಾಲು ಅಡಿಯಷ್ಟು ನೀರು ಏರಿಕೆಯಾಗಿದೆ. ಭದ್ರಾ ಡ್ಯಾಂಗೆ 13,640 ಕ್ಯೂಸೆಕ್ ನೀರು ಬರುತ್ತಿದ್ದು ಮೂರು ಅಡಿಯಷ್ಟು ಹೆಚ್ಚಾಗಿದೆ. ಗಾಜನೂರು ತುಂಗಾ ಜಲಾಶಯಕ್ಕೆ 26,843 ಕ್ಯೂ. ಒಳಹರಿವಿದೆ.

ಕಳಸ- ಹೊರನಾಡು ಸಂಪರ್ಕ ಕಡಿತ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಕಳಸ ಹೋಬಳಿಯಲ್ಲಿ ನಿರಂತರ ಮಳೆ ಬೀಳುತ್ತಿದ್ದು, ಭದ್ರಾ ನದಿ ಗರಿಷ್ಠ ಮಟ್ಟದಲ್ಲಿ ತುಂಬಿ ಹರಿಯುತ್ತಿರುವುದರಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿತು. ಇದರಿಂದ ಪ್ರವಾಸಿಗರು ಪರದಾಡುವಂತಾಯಿತು.

ಮಂಗಳೂರು-ಹಾಸನ ಸಂಪರ್ಕ ಕಟ್

ಸಕಲೇಶಪುರ ತಾಲೂಕಿನ ಯಡಕುಮರಿ ಬಳಿ ಸೋಮವಾರ ರೈಲು ಹಳಿಯ ಮೇಲೆ ಗುಡ್ಡ ಕುಸಿದ ಪರಿಣಾಮ ಹಾಸನ- ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ಬಹಳಷ್ಟು ಪ್ರಯಾಣಿಕರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಟಿಕೆಟ್ ಪಡೆದಿದ್ದು, ಶಿರಾಡಿಘಾಟ್ ಬಂದ್ ಆಗಿರುವುದರಿಂದ ಚಾರ್ವಡಿ ಘಾಟಿ ಮೂಲಕ ಮಂಗಳೂರಿಗೆ ಹೊರಟ ಬಸ್​ನಲ್ಲಿ ಉಜಿರೆಗೆೆ ತೆರಳಿ, ಅಲ್ಲಿಂದ ಮತ್ತೊಂದು ಬಸ್​ನಲ್ಲಿ ಸುಬ್ರಹ್ಮಣ್ಯಕ್ಕೆ ಹೋಗುವ ಅನಿವಾರ್ಯತೆಗೆ ಸಿಲುಕಿಕೊಂಡರು.

ಹಾಸನ ತತ್ತರ

ಮುಂಗಾರಿನ ಆರ್ಭಟಕ್ಕೆ ಹಾಸನ ಜಿಲ್ಲೆಯ ಮಲೆನಾಡು ಭಾಗ ತತ್ತರಿಸಿದ್ದು, ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಬೇಲೂರು ತಾಲೂಕುಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿಯ ಹೊಡೆತಕ್ಕೆ ನೂರಾರು ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸಕಲೇಶಪುರ ಹಾಗೂ ಆಲೂರು ತಾಲೂಕುಗಳ ಶಾಲೆ, ಕಾಲೇಜುಗಳಿಗೆ ಸೋಮವಾರ ರಜೆ ಘೊಷಿಸಲಾಯಿತು.

ಮುಂದುವರಿದ ಮಳೆ

ಕರಾವಳಿ, ಒಳನಾಡು ಪ್ರದೇಶಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಮಂಗಳವಾರ ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಜೆ ಘೋಷಣೆ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಚಿಕ್ಕಮಗಳೂರು, ಮೂಡಿಗೆರೆ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೊಷಿಸಲಾಗಿದೆ.

ತುಂಬಿ ಹರಿಯುತ್ತಿವೆ ನದಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಕುಮಾರಧಾರಾ, ನೇತ್ರಾವತಿ ಸೇರಿದಂತೆ ವಿವಿಧ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಶ್ರೀ ಕ್ಷೇತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಸಂಪೂರ್ಣ ಜಲಾವೃತವಾಗಿದೆ. ಮುಳುಗು ಸೇತುವೆ ಎಂದೇ ಖ್ಯಾತಿ ಪಡೆದಿರುವ ಉಪ್ಪಿನಂಗಡಿ -ಸುಬ್ರಹ್ಮಣ್ಯ ಸಂಪರ್ಕದ ಹೊಸ್ಮಠ ಸೇತುವೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು, ಪ್ರವಾಸಿಗರು, ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಚಾರ್ಮಾಡಿ ಘಾಟ್ ಜಾಮ್

ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸೋಮವಾರ ಅಲ್ಲಲ್ಲಿ ಗುಡ್ಡ ಕುಸಿದು, ಮರಗಳು ಬಿದ್ದು ಇಡೀ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಹದಗೆಟ್ಟಿದ್ದು, ಆರು ಗಂಟೆಗೂ ಹೆಚ್ಚುಕಾಲ ಪ್ರಯಾಣಿಕರು ವಾಹನಗಳಲ್ಲೇ ಕಳೆದರು. ಬಸ್ ಇತರ ವಾಹನಗಳಲ್ಲಿದ್ದ ಸಾವಿರಾರು ಪ್ರಯಾಣಿಕರು ಆಹಾರ ಸೇವನೆ ಮಾಡಲಾಗದೆ ಮತ್ತು ಶೌಚಕ್ಕೆ ಹೋಗಲಾಗದೆ ಇಕ್ಕಟ್ಟಿಗೆ ಸಿಲುಕಿದರು. ಚಾರ್ವಡಿ ಘಾಟ್ ಹೆದ್ದಾರಿಯ ಸುಮಾರು 20 ಕಿ.ಮೀ. ಭಾಗದಲ್ಲಿ ವಾಹನಗಳು ಸಂಚರಿಸಲಾಗದೆ ಗಂಟೆಗಟ್ಟಲೆ ತೆವಳುವ ಪರಿಸ್ಥಿತಿ ನಿರ್ವಣಗೊಂಡಿತು.

ವಿರಾಮದೊಟ್ಟಿಗೆ ಅನಾಹುತ

ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಭಾನುವಾರ ಇಡೀ ದಿನ ಸುರಿದಿದ್ದ ಮಳೆ. ಸೋಮವಾರ ಸ್ವಲ್ಪ ವಿರಾಮ ಪಡೆದಿದೆ. ಆದರೆ, ಭಾನುವಾರದ ಮಳೆ ಉಂಟುಮಾಡಿದ ಅನಾಹುತಗಳಿಂದ ಜನರು ಚೇತರಿಸಿಕೊಳ್ಳಲು ಅನೇಕ ದಿನ ಬೇಕಾಗಬಹುದು. ಹುಬ್ಬಳ್ಳಿ-ಧಾರವಾಡದಲ್ಲಿ ಸೋಮವಾರ ಆಗೀಗ ಜಿಟಿ ಜಿಟಿ ಮಳೆ ಸುರಿಯಿತಷ್ಟೇ. ಮೋಡ-ಬಿಸಿಲ ಇಣುಕಾಟ ಮುಂದುವರಿದಿದೆ. ಕೆಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನರು ರೋಸಿ ಹೋಗಿದ್ದಾರೆ. ಮಳೆ ಸಣ್ಣದಾಗಿ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಲು ಅನುವು ಮಾಡಿಕೊಟ್ಟಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಳ ತಾಲೂಕುಗಳಲ್ಲಿ ಆಗೊಮ್ಮೆ, ಈಗೊಮ್ಮೆ ಮಳೆ ಬಂದು ಹೋಗುತ್ತಿದೆ. ಮೋಡ ಕವಿದ ವಾತಾವರಣ ಮುಂದುವರಿದಿದೆ. ಆದರೆ, ಭಾರಿ ಗಾಳಿ ಬೀಸುತ್ತಿದೆ. ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿವೆ. ಗೋಕರ್ಣದಲ್ಲಿ 50 ಎಕರೆ ಗದ್ದೆಗೆ ಸಮುದ್ರದ ಉಪ್ಪು ನೀರು ನುಗ್ಗಿ ಹಾನಿಯಾಗಿದೆ.

ಪರಿಹಾರಕ್ಕೆ ತಡಬೇಡ ಎಂದ ಸಚಿವರು

ಬೆಂಗಳೂರು: ನೈಸರ್ಗಿಕ ವಿಕೋಪ ಹಾಗೂ ಮಳೆ ಹಾನಿ ಪರಿಹಾರದ ವಿಚಾರದಲ್ಲಿ ತಡಮಾಡದೇ ವಿವೇಚನೆ ಮತ್ತು ಮಾನವೀಯತೆಯಿಂದ ಕೆಲಸ ನಿರ್ವಹಿಸಿ. ಬಡವರ ಮನೆ ಮತ್ತು ಮನಸ್ಸು ಗೆಲ್ಲುವಂತೆ ಕೆಲಸ ಮಾಡಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಕಂದಾಯ ಇಲಾಖೆ ಜವಾಬ್ದಾರಿ ಪಡೆದ ನಂತರ ಅಧಿಕಾರಿಗಳ ಸಭೆ ನಡೆಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಡತದ ಲೆಕ್ಕಾಚಾರದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ. ವಾಸ್ತವ ಪರಿಶೀಲಿಸಿ ಪರಿಹಾರ ವಿತರಣೆ ಮಾಡಿ ಎಂದು ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಪ್ರಸಕ್ತ ವರ್ಷ 94 ಮಂದಿ ಸಿಡಿಲಿಗೆ ಬಲಿಯಾಗಿದ್ದರೆ, 10 ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಮಳೆ ಸಂಬಂಧಿತ ಇತರೆ ಅವಘಡಗಳಿಂದಲೂ ಜನ ಮೃತಪಟ್ಟಿದ್ದು, ಮತಪಟ್ಟವರ ಕುಟುಂಬದವರಿಗೆ 4 ಲಕ್ಷ ರೂ. ಪರಿಹಾರ ಮತ್ತು ಒಂದು ಲಕ್ಷ ಸಿಎಂ ಪರಿಹಾರ ನಿಧಿಯಿಂದ ನೀಡಲಾಗಿದೆ. ಮನೆ-ಗಾಳಿಯಿಂದ 2101 ಭಾಗಶಃ ಹಾನಿಯಾಗಿದ್ದರೆ, 189 ಮನೆ ಪೂರ್ಣ ಹಾನಿಯಾಗಿವೆ. ಮಾರ್ಗಸೂಚಿ ಪ್ರಕಾರ ಭಾಗಶಃ ಹಾನಿಯಾದ ಮನೆಗೆ 5200 ರೂ. ಹಾಗೂ ಪೂರ್ಣ ಹಾನಿಯಾಗಿದ್ದ ಮನೆಗೆ 95100 ರೂ.ನಂತೆ ಪರಿಹಾರ ವಿತರಿಸಲಾಗಿದೆ. 323 ಜಾನುವಾರುಗಳ ಜೀವಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಪ್ರತಿ ಜಾನವಾರು ಹಾನಿ ಪ್ರಕರಣದಲ್ಲಿ ತಲಾ 25 ಸಾವಿರದಂತೆ ಪರಿಹಾರ ವಿತರಿಸಲಾಗಿದೆ. ಈವರೆಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಪ್ರಕಾರ ಒಟ್ಟು 8,63 ಕೋಟಿ ರೂ.ಪರಿಹಾರ ವಿತರಿಸಲಾಗಿದೆ ಎಂದರು.

ಪ್ರಕೃತಿ ವಿಕೋಪ ಪರಿಹಾರ ಬಳಕೆಗಾಗಿ ಪ್ರತಿ ಜಿಲ್ಲಾಧಿಕಾರಿ ಬಳಿಯೂ 5 ಕೋಟಿ ರೂ. ಇರುವಂತೆ ನೋಡಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣದಿಂದ ಉಂಟಾದ ಭೂ ಕುಸಿತದಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಆಗದಿರಲಿ ಎಂದು ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದರು.

ಈ ಬಾರಿ ಮಳೆ ಉತ್ತಮ ರೀತಿಯಲ್ಲಿ ಬೀಳುತ್ತಿರುವ ಕಾರಣ ನಿರೀಕ್ಷೆಗೆ ಮೀರಿದಂತೆ ಬಿತ್ತನೆಯಾಗುತ್ತಿದೆ. ಈ ಅವಧಿಯಲ್ಲಿ 5.65 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆ ಗುರಿ ಇತ್ತು, ಆದರೆ, 5.85 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ ಎಂದು ತಿಳಿಸಿದರು.

ಮಳೆ ಹಾನಿಯಿಂದ ನಷ್ಟ ಹೊಂದಿದವರಿಗೆ ಪರಿಹಾರ ಕೊಟ್ಟಿಲ್ಲ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿ ಲೆಕ್ಕ ಕೇಳಿದ್ದರು. ಪರಿಹಾರ ನೀಡಿದ್ದರ ಲೆಕ್ಕ ಕೊಟ್ಟಿದ್ದೇವೆ. ಪರಿಶೀಲಿಸಿಕೊಳ್ಳಲಿ.

| ಆರ್.ವಿ.ದೇಶಪಾಂಡೆ, ಕಂದಾಯ ಸಚಿವ

Comments are closed.