ಕರ್ನಾಟಕ

ಮಹಿಳೆಯೊಬ್ಬರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದಿಂದ ಮಣಿಪಾಲ ಆಸ್ಪತ್ರೆವರೆಗೂ ಝೀರೋ ಟ್ರಾಫಿಕ್‌!

Pinterest LinkedIn Tumblr


ಶಿವಮೊಗ್ಗ: ಜೀವ ನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಮತ್ತವರ ಸಿಬಂದಿ ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿದ ಅಪರೂಪದ ಘಟನೆ ನಡೆದಿದೆ.
ಮಹಾನಗರಗಳಲ್ಲಿ ಒಂದು ಆಸ್ಪತ್ರೆ ಯಿಂದ ಇನ್ನೊಂದು ಆಸ್ಪತ್ರೆಗೆ ಹೃದಯ, ಕಿಡ್ನಿ ಸಾಗಿಸುವ ಸಂದರ್ಭ ಪೊಲೀಸರು ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸುವುದು ಸಾಮಾನ್ಯ. ಆದರೆ ಶಿವಮೊಗ್ಗದಲ್ಲೂ ಇಂತಹದ್ದೇ ಒಂದು ಘಟನೆ ಮಂಗಳವಾರ ನಡೆದಿದ್ದು, ಶಿವಮೊಗ್ಗ ಆಸ್ಪತ್ರೆಯಿಂದ ಮಣಿಪಾಲ್‌ ಆಸ್ಪತ್ರೆವರೆಗೂ ಪೊಲೀಸರು ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಪೊಲೀಸರ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಆಗಿದ್ದೇನು: ಕಳೆದ ಎರಡು ದಿನದ ಹಿಂದೆ ಸಾಗರ ತಾಲೂಕಿನ ಮಕ್ಕಿಮನೆ ನಿವಾಸಿ ಸುಜಾತಾ (32) ತೀವ್ರ ಅಸ್ವಸ್ಥರಾಗಿದ್ದರು. ಇವರ ಪತಿ ಪತಿ ಪದ್ಮರಾಜ್‌ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ಬಳಿಕ ಸುಜಾತ ಅವರ ಕಿಡ್ನಿ ಹಾಗೂ ಲಿವರ್‌ನಲ್ಲಿÉ ಗಂಭೀರ ಸಮಸ್ಯೆ ಇರುವುದು ಕಂಡುಬಂದಿದೆ. ಕೂಡಲೇ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ತಿಳಿಸಿದ್ದಾರಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಬೇಕು ಎಂದು ಸೂಚಿಸಿದ್ದಾರೆ. ಆದರೆ ಸಂಚಾರ ದಟ್ಟಣೆ ಮಧ್ಯೆ ನಿಗದಿತ ಸಮಯಕ್ಕೆ ಮಣಿಪಾಲ ತಲುಪುವುದು ಸುಲಭವಾಗಿರಲಿಲ್ಲ. ಹೀಗಾಗಿ ಪದ್ಮರಾಜ್‌, ಪೊಲೀಸರ ಮೊರೆ ಹೋಗಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಅಭಿವನ್‌ ಖರೆ ಅವರಿಗೆ ವಿಷಯ ತಿಳಿಸಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಸಮಸ್ಯೆ ಆಲಿಸಿದ ಎಸ್ಪಿ ಅಭಿನವ ಖರೆ ತತ್‌ಕ್ಷಣವೇ ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆ ಸಿಬಂದಿಗೆ ಸೂಚನೆ ನೀಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ನಂಜಪ್ಪ ಆಸ್ಪತ್ರೆಯಿಂದ ಎನ್‌ಟಿ ರಸ್ತೆ ಮೂಲಕ ತೀರ್ಥಹಳ್ಳಿ, ಆಗುಂಬೆ ಮಾರ್ಗದುದ್ದಕ್ಕೂ ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ 1.30ಕ್ಕೆ ಶಿವಮೊಗ್ಗದಿಂದ ಹೊರಟ ಆ್ಯಂಬುಲೆನ್ಸ್‌ 4. 15ರ ಸುಮಾರಿಗೆ ಮಣಿಪಾಲ ತಲುಪಿದೆ ಎನ್ನಲಾಗಿದೆ.

ಅತ್ತ ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ ಅಭಿನವ್‌ ಖರೆ ಅವರು ಅಲ್ಲಿಯೂ ಇದೇ ವ್ಯವಸ್ಥೆ ಕಲ್ಪಿಸಲು ನೆರವಾದರು. ಪೊಲೀಸರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Comments are closed.