ಕರ್ನಾಟಕ

ಗೌರಿ ಲಂಕೇಶ್‌ ಶೂಟ್‌ ಮಾಡಿದ್ದು ನಾನೇ: ತಪ್ಪೊಪ್ಪಿಕೊಂಡ ಪರಶುರಾಮ್‌ ವಾಗ್ಮೋರೆ

Pinterest LinkedIn Tumblr

ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್‌ ಮೇಲೆ ಶೂಟ್‌ ಮಾಡಿದ್ದು ನಾನೇ ‘ ಎಂದು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಸಿಂದಗಿಯ ಪರಶುರಾಮ್‌ ವಾಗ್ಮೋರೆ ಎಸ್‌ಐಟಿ ಅಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ಆರಂಭಿಸುತ್ತಿದ್ದಂತೆಯೇ ಅಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿರುವ ಪರಶುರಾಮ್‌, ”ಶೂಟ್‌ ಮಾಡಿದ್ದು ನಾನೇ, ಆದರೆ ಶೂಟ್‌ ಮಾಡಿದ ನಂತರ ನನ್ನ ಕೈಯಿಂದ ಬೇರೊಬ್ಬರು ಗನ್‌ ಪಡೆದುಕೊಂಡರು. ಅವರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ,” ಎಂದು ತಿಳಿದು ಬಂದಿದೆ. ಈ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ, ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ವಿವರಿಸುವುದಾಗಿ ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದ ಪರಶುರಾಮ್‌, ಆ ನಂತರ ಅಧಿಕಾರಿಗಳು ಕೆಲವು ಸಾಕ್ಷ್ಯಗಳನ್ನು ಮುಂದಿಟ್ಟು ಕೇಳಿದಾಗ ಒಪ್ಪಿಕೊಂಡಿದ್ದಾನೆ. ಹತ್ಯೆ ನಡೆದ ದಿನ, ಹತ್ಯೆ ನಡೆಯುವ ಸಂದರ್ಭದಲ್ಲಿ ಈತ ರಾಜರಾಜೇಶ್ವರಿನಗರದಲ್ಲೇ ಇದ್ದ ದಾಖಲೆ ತೋರಿಸಿದಾಗ ಹೌದು ಏರಿಯಾದಲ್ಲೇ ಇದ್ದೆ ಎಂದು ಒಪ್ಪಿಕೊಂಡಿದ್ದು, ಆ ದಿನ ಗೌರಿ ಮನೆ ಬಳಿ ಹೋಗಿರಲಿಲ್ಲ ಎಂದು ಉತ್ತರಿಸಿದ್ದ. ಆ ನಂತರ ಈತ ಹತ್ಯೆ ಸಂದರ್ಭದಲ್ಲಿ ಬೈಕಿನಲ್ಲೇ ಗೌರಿ ಮನೆ ಎದುರಿಗೇ ಇದ್ದ ಬಗ್ಗೆ ಸಾಕ್ಷ್ಯ ಮುಂದಿಟ್ಟಾಗ ಹೌದು ನಾನಿದ್ದೆ ಎಂದು ಉತ್ತರಿಸಿದ್ದಾನೆ ಎಂದು ತಿಳಿದು ಬಂದಿದೆ.

ವಾಗ್ಮೋರೆ ಜತೆ ಹೆಚ್ಚಿನ ಸಂಪರ್ಕದಲ್ಲಿದ್ದವನು ಪ್ರವೀಣ್‌ ಮಾತ್ರ. ಹೊಟ್ಟೆ ನವೀನ್‌ ಬಗ್ಗೆ ಗೊತ್ತಿತ್ತಾದರೂ ಹೆಚ್ಚಿನ ಸಂಪರ್ಕ ಇರಲಿಲ್ಲ. ”ಹತ್ಯೆಗೂ ಎರಡು ದಿನ ಮೊದಲು ನವೀನ್‌ನನ್ನು ಭೇಟಿ ಆಗಿದ್ದು ಬಿಟ್ಟರೆ ಮತ್ತೆ ಸಿಗಲಿಲ್ಲ. ನವೀನ್‌ಗೆ ನಾನು ಸುಂಕದಕಟ್ಟೆಯಲ್ಲಿ ಉಳಿದುಕೊಂಡಿದ್ದ ಮನೆ ತೋರಿಸಿದ್ದು ಪ್ರವೀಣನೇ. ಬೆಂಗಳೂರಿನಲ್ಲಿ ಓಡಾಡಲು ಬೈಕಿನ ವ್ಯವಸ್ಥೆ ಮಾಡಿದ್ದು ನವೀನ್‌ ಎನ್ನುವ ವಿಚಾರವನ್ನೂ ನನಗೆ ತಿಳಿಸಿದ್ದು ಪ್ರವೀಣನೇ. ಅಮೋಲ್‌ ಕಾಳೆ ನನಗೆ ಚೆನ್ನಾಗಿ ಗೊತ್ತು. ಆದರೆ ಅಮಿತ್‌ ದೇಗ್ವೇಕರ್‌ನನ್ನು ಯಾವತ್ತೂ ಭೇಟಿ ಮಾಡಿಲ್ಲ,” ಎಂದು ಇದುವರೆಗಿನ ತನಿಖೆಯಲ್ಲಿ ವಾಗ್ಮೋರೆ ಬಾಯಿ ಬಿಟ್ಟಿದ್ದಾನೆ ಎಂದು ಗೊತ್ತಾಗಿದೆ.

ಪರಶುರಾಮ್‌ ಡೈರಿ ಪತ್ತೆ
ಗೌರಿ ಲಂಕೇಶ್‌ ಹತ್ಯೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮ್‌ದಾರ್‌ ಅವರೂ ಕೂಡ ಹಂತಕರ ಹಿಟ್‌ ಲೀಸ್ಟ್‌ನಲ್ಲಿ ಇದ್ದರು ಎಂಬ ಆಘಾತಕಾರಿ ಸಂಗತಿ ಗೊತ್ತಾಗಿದೆ.

ಬಂಧಿತ ಪ್ರವೀಣ್‌, ಅಮೋಲ್‌ ಕಾಳೆ ಮತ್ತು ಸಿಂದಗಿಯ ಪರಶುರಾಮ ವಾಗ್ಮೋರೆ ಅವರ ಬಳಿ ವಶಪಡಿಸಿಕೊಂಡಿರುವ ಕೆಲವು ಪುಸ್ತಕ, ಡೈರಿ ಹಾಗೂ ನೋಟ್‌ಬುಕ್‌ಗಳಲ್ಲಿ ಒಟ್ಟು 11 ಮಂದಿಯ ಹೆಸರಿತ್ತು. ಅದರಲ್ಲಿ ಪ್ರಮುಖವಾಗಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮ್‌ದಾರ್‌ ಜತೆಗೆ ನಿಜಗುಣಾನಂದ ಸ್ವಾಮೀಜಿ ಹಾಗೂ ನಿವೃತ್ತ ನ್ಯಾಯಾಧೀಶ ನಾಗಮೋಹನ್‌ದಾಸ್‌ ಸೇರಿ ಮೂವರ ಹೆಸರನ್ನು ಮಾತ್ರ ಪ್ರತ್ಯೇಕವಾಗಿ ರೌಂಡಪ್‌ ಮಾಡಿದ್ದರು. ಇದರ ಕೆಳಗೆ ಇನ್ನೂ 8 ಮಂದಿಯ ಹೆಸರಿತ್ತು ಎನ್ನಲಾಗಿದೆ.

ಹಿಂದಿನ ಸರಕಾರದಲ್ಲಿ ನೇಮಕಗೊಂಡಿರುವ ಪ್ರಾಧಿಕಾರವೊಂದರ ಅಧ್ಯಕ್ಷರು ಮತ್ತು ಸಾಹಿತಿ ಮಹೇಶ್‌ ಚಂದ್ರಗುರು ಅವರುಗಳ ಹೆಸರೂ ಇದ್ದು ಇವರಿಗೆಲ್ಲಾ ಎಚ್ಚರಿಕೆಯಿಂದ ಇರುವಂತೆ ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಬಳಿ ಟಾರ್ಗೆಟ್‌ ಆದವರ ಭಾಷಣ ಪ್ರತಿಗಳಿದ್ದವು. ನಿಜಗುಣಾನಂದ ಸ್ವಾಮಿಗಳು ಓಡಾಡುವ ಕಾರಿನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.

ಚುನಾವಣೆಗೂ ಮೊದಲು
ರಾಜ್ಯ ವಿಧಾನಸಭೆ ಚುನಾವಣೆಗೂ ಮೊದಲೇ ಪ್ರೊ. ಭಗವಾನ್‌ ಅವರನ್ನು ಹತ್ಯೆಗೈಯುವ ತಯಾರಿಯನ್ನು ತಂಡ ಮಾಡಿಕೊಂಡಿತ್ತು. ಎಸ್‌ಐಟಿ ತಂಡ ಹೊಟ್ಟೆ ನವೀನ್‌ನನ್ನು ಹಿಂಬಾಲಿಸುತ್ತಿದೆ ಎನ್ನುವ ಸುಳಿವು ಅವರಿಗೂ ಸಿಕ್ಕಿತ್ತು. ಹೀಗಾಗಿ ಏಕಾಏಕಿ ನವೀನ್‌ನ ಸಂಪರ್ಕದಿಂದ ಸುಜಿತ್‌ ಅಲಿಯಾಸ್‌ ಪ್ರವೀಣ್‌ ದೂರ ಉಳಿದಿದ್ದ. ಶ್ರೀರಂಗಪಟ್ಟಣದ ಅನಿಲ್‌ಗೂ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರವೀಣ್‌ ಸೂಚಿಸಿದ್ದ ಎನ್ನಲಾಗಿದೆ. ಆದರೆ ಮೊದಲಿಗೆ ಅನಿಲ್‌ನನ್ನು ವಶಕ್ಕೆ ಪಡೆದಿದ್ದ ಎಸ್‌ಐಟಿ ತಂಡ ಗುಟ್ಟಾಗಿ ಈತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಸ್ವ ಇಚ್ಚಾ ಹೇಳಿಕೆಯನ್ನು ದಾಖಲಿಸಿಬಿಟ್ಟಿತ್ತು. ಇದರಿಂದ ಪ್ರೊ. ಭಗವಾನ್‌ ಕೊಲೆ ಸಂಚು ಜಾರಿ ಆಗುವುದು ನಿಧಾನವಾಯಿತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Comments are closed.