ಕರ್ನಾಟಕ

ಮದ್ಯದ ಅಮಲಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬನ ಅವಾಂತರ

Pinterest LinkedIn Tumblr


ಬೆಂಗಳೂರು: ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ ಮದ್ಯದ ಅಮಲಿನಲ್ಲಿ ಸೃಷ್ಟಿಸಿದ ಅವಾಂತರಕ್ಕೆ ಮೂರು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಸರಣಿ ರಸ್ತೆ ಅಪಘಾತವಾದ ಘಟನೆ ನಾಗರಬಾವಿ ಪಾಪರೆಡ್ಡಿಪಾಳ್ಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ವಿಜಯನಗರದ ರಾಹುಲ್‌(22) ಘಟನೆಗೆ ಕಾರಣವಾದ ವಿದ್ಯಾರ್ಥಿ. ನಗರದ ಪ್ರತಿಷ್ಠಿತ ಮೆಡಿಕಲ್‌ ಕಾಲೇಜಿನಲ್ಲಿ ಮೊದಲನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ರಾಹುಲ್‌, ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮದ್ಯಪಾನ ಮಾಡಿ ಮೆಜೆಸ್ಟಿಕ್‌ನಿಂದ ವಿಜಯನಗರದ ಕಡೆ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ.

ಈ ವೇಳೆ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ ಬಳಿಯ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಯ ಬಲ ಬದಿಗೆ ಕಾರು ಡಿಕ್ಕಿ ಹೊಡೆದಿದ್ದಾನೆ. ನಿಯಂತ್ರಣ ತಪ್ಪಿದ ಕಾರು ಪಕ್ಕದಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ರಾಹುಲ್‌ ಕಾರಿನಲ್ಲಿದ್ದ ಏರ್‌ಬ್ಯಾಗ್‌ ತೆರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ರಾಹುಲ್‌ ಕಾರು ಡಿಕ್ಕಿ ಹೊಡೆದಿದ್ದ ಫೋರ್ಡ್‌ ಮತ್ತು ಸ್ಕೋಡ ಕಾರುಗಳು ಜಖಂಗೊಂಡಿದ್ದು, ಸ್ಕೋಡಾ ಕಾರಿನ ಪಕ್ಕದಲ್ಲಿ ನಿಂತಿದ್ದ ಕಲಾವಿದ ಸುಚೇತನ್‌ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ರಾಹುಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಹುಲ್‌ ಗುತ್ತಿಗೆದಾರರೊಬ್ಬರ ಪುತ್ರ ಎಂದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.

Comments are closed.