ಕರ್ನಾಟಕ

ಅಪಾಯಕಾರಿ ರಾಸಾಯನಿಕದೊಂದಿಗೆ ನಕಲಿ ಕ್ರಿಮಿನಾಶಕ ಮಾರುತ್ತಿದ್ದವರ ಬಂಧನ

Pinterest LinkedIn Tumblr

ಬೆಂಗಳೂರು: ಅಪಾಯಕಾರಿ ರಾಸಾಯನಿಕದೊಂದಿಗೆ ನಕಲಿ ಕ್ರಿಮಿನಾಶಕ ಸಿದ್ಧಪಡಿಸಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹನುಮಂತನಗರದ ಪಿ.ವಿ.ಹರಿನಾಥ್‌ (53) ಮತ್ತು ಬಸವನಗುಡಿಯ ರಾಕೇಶ್‌(42) ಬಂಧಿತರು.

ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ 6 ಬಾಕ್ಸ್‌ ನಕಲಿ ಕ್ರಿಮಿನಾಶಕ, 240 ಟಿನ್‌ಗಳು, ಖಾಲಿ ಟಿನ್‌, ಟ್ಯೂಬ್‌ಗಳು, ಸೀಲಿಂಗ್‌ ಮತ್ತು ಪ್ಯಾಕಿಂಗ್‌ಗೆ ಬಳಸುವ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ. ಇದೇ ವೇಳೆ ಆರೋಪಿಗಳಿಗೆ ನಕಲಿ ಕ್ರಿಮಿನಾಶಕಗಳನ್ನು ತುಂಬಲು ಟ್ಯೂಬ್‌ ಮತ್ತು ಕ್ಯಾನ್‌ಗಳನ್ನು ತಯಾರಿಸಿಕೊಟ್ಟ ಎಸ್‌ಹೆಚ್‌ಎನ್‌ ಸಂಸ್ಥೆ ವಿರುದ್ಧ ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹರಿನಾಥ್‌ ಈ ಮೊದಲು ಕ್ರಿಮಿನಾಶಕ ಮಾರಾಟ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಹೀಗಾಗಿ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಆರೋಪಿ ತನಗೆ ಪರಿಚಯವಿರುವ ರಾಕೇಶ್‌ ಜತೆ ಸೇರಿಕೊಂಡು ಅಕ್ರಮವಾಗಿ ದಂಧೆ ಆರಂಭಿಸಿದ್ದಾನೆ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕಳೆದೊಂದು ವರ್ಷದಿಂದ ಇಬ್ಬರು ನಕಲಿ ಕ್ರಿಮಿನಾಶಕ ತಯಾರಿಸಿ ಮಾರಾಟ ಮಾಡುತ್ತಿದ್ದರು.

ಹನುಮಂತನಗರದ ಮೌಂಟ್‌ಜಾಯ್‌ ಎಕ್ಸ್‌ಟೆನನ್‌ನಲ್ಲಿರುವ ಮನೆಯ ತಾರಸಿಯಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ಅಲ್ಲಿ “ಅಲೂಮೀನಿಯಂ ಫಾಸ್ಪೈಡ್‌’ ಎಂಬ ಅಪಾಯಕಾರಿ ರಾಸಾಯನಿಕ ಬಳಸಿ ನಕಲಿ ಕ್ರಿಮಿನಾಶಕಗಳನ್ನು ತಯಾರಿಸುತ್ತಿದ್ದರು. ಇದನ್ನೇ ಅಸಲಿ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Comments are closed.