ಕರ್ನಾಟಕ

ಬೆಂಗಳೂರಿನಲ್ಲಿ ಕಳ್ಳನನ್ನು ಬೆನ್ನಟ್ಟಿ ಹಿಡಿದ ಪೊಲೀಸ್ ಪೇದೆಗೆ ಸಿಕ್ಕಿದ ವಿಶೇಷ ಗಿಫ್ಟ್ ಏನು ಗೊತ್ತೇ..?

Pinterest LinkedIn Tumblr

ಬೆಂಗಳೂರು: ಗುರುವಾರ ಮುಂಜಾನೆ ಸುಮಾರು 4 ಕಿಮೀ ಚೇಸ್ ಮಾಡಿ ಕಳ್ಳನನ್ನು ಹಿಡಿದ ಪೇದೆ ಕೆಇ ವೆಂಕಟೇಶ್ ಎಂಬುವರಿಗೆ ಪೊಲೀಸ್ ಇಲಾಖೆ ಅಪರೂಪದ ಗಿಫ್ಟ್ ನೀಡಿದೆ.

ಹೋಟೆಲ್‌ ಸಿಬ್ಬಂದಿಯ ಮೊಬೈಲ್‌ ಕಸಿದು ಸ್ಕೂಟರ್‌ನಲ್ಲಿ ಪರಾರಿಯಾಗುತ್ತಿದ್ದ ನಾಲ್ವರನ್ನು ಬೈಕ್‌ನಲ್ಲಿ 4 ಕಿ.ಮೀ ಚೇಸ್‌ ಮಾಡಿದ್ದ ಬೆಳ್ಳಂದೂರು ಠಾಣೆ ಪೇದೆ ಕೆ.ಇ.ವೆಂಕಟೇಶ್‌ ಅವರಿಗೆ ‘ಕೇರಳ ಹನಿಮೂನ್‌ ಪ್ಯಾಕೇಜ್‌’ ಉಡುಗೊರೆ ಜತೆಗೆ 10 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ.

ಕೋರಮಂಗಲ ನಿವಾಸಿ ಅರುಣ್‌(20) ಬಂಧಿತ ಆರೋಪಿ. ಈತನಿಂದ, ಒಂದು ಮೊಬೈಲ್‌ ಫೋನ್‌ ಹಾಗೂ ಸ್ಕೂಟರ್‌ ಜಪ್ತಿ ಮಾಡಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬೆಳ್ಳಂದೂರು ಠಾಣೆಯ ಪೇದೆ ಕೆ.ಇ. ವೆಂಕಟೇಶ್‌ ಗುರುವಾರ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ಗಸ್ತು ತಿರುಗುತ್ತಿದ್ದ ವೇಳೆ ಸರ್ಜಾಪುರ ರಸ್ತೆ ಬಿಗ್‌ ಬಜಾರ್‌ ಬಳಿ ತಡರಾತ್ರಿ 2.45ರ ಸುಮಾರಿಗೆ ಕೆಎಫ್‌ಸಿ ನೌಕರ ಹನುಮಂತಪ್ಪ ಎಂಬುವವರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದರು. ಈ ವೇಳೆ 2 ಸ್ಕೂಟರ್‌ನಲ್ಲಿ ಬಂದ ನಾಲ್ವರು ಆರೋಪಿಗಳು, ಹನುಮಂತಪ್ಪನನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್‌ ಕಸಿದುಕೊಂಡಿದ್ದರು. ಕೂಡಲೇ ಹನುಮಂತಪ್ಪ ಕಳ್ಳ, ಕಳ್ಳ ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ಹತ್ತಿರದಲ್ಲೇ ಇದ್ದ ಪೇದೆ ವೆಂಕಟೇಶ್‌, ಕೂಗಾಟದ ಸದ್ದು ಕೇಳಿ ಬೈಕ್‌ನಲ್ಲಿ ಆರೋಪಿಗಳನ್ನು ಚೇಸ್‌ ಮಾಡಿದ್ದರು.

ಸ್ವಲ್ಪ ದೂರ ಹೋಗುತ್ತಿದ್ದಂತೆಯೇ 1 ಸ್ಕೂಟರ್‌ನಲ್ಲಿದ್ದ ಇಬ್ಬರು ಆರೋಪಿಗಳು ಎಡ ತಿರುವು ಪಡೆದು ಪರಾರಿಯಾಗಿದ್ದರು. ಮತ್ತೊಂದು ಸ್ಕೂಟರ್‌ ಅನ್ನು ಸುಮಾರು 4 ಕಿ.ಮೀ ಚೇಸ್‌ ಮಾಡಿದ ವೆಂಕಟೇಶ್‌, ತಮ್ಮ ಬೈಕ್‌ ಅನ್ನು ಅದಕ್ಕೆ ಡಿಕ್ಕಿ ಹೊಡೆಸಿದ್ದಾರೆ. ನಿಯಂತ್ರಣ ತಪ್ಪಿ ಸ್ಕೂಟರ್‌ ಸಮೇತ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಇಬ್ಬರು ಕೆಳಗೆ ಬಿದ್ದಿದ್ದಾರೆ. ಸ್ಥಳದಿಂದ ಓಡಿಕೊಂಡು ಪರಾರಿಯಾಗುತ್ತಿದ್ದ ಇಬ್ಬರ ಪೈಕಿ ಅರುಣ್‌ನನ್ನು ಬೆನ್ನಟ್ಟಿ ಹಿಡಿದುಕೊಂಡಿದ್ದಾರೆ.

ಇತ್ತೀಚೆಗೆ ವೆಂಕಟೇಶ್ ನಿಶ್ಚಿತಾರ್ಥವಾಗಿದ್ದು, ನವೆಂಬರ್ 2 ರಂದು ವಿವಾಹವಿದೆ, ಹೀಗಾಗಿ ಪೊಲೀಸ್ ಇಲಾಖೆ ನೂತನ ದಂಪತಿಗೆ ಹನಿಮೂನ್ ಪ್ಯಾಕೇಜ್ ಗಿಫ್ಟ್ ನೀಡಲು ಮುಂದಾಗಿದೆ, ಕೇರಳದ ಮುನ್ನಾರ್ ನಲ್ಲಿ 2 ಹಾಗೂ ಅಲೆಪ್ಪಿ ಬೋಟ್ ಹೌಸ್ ನಲ್ಲಿ 1 ರಾತ್ರಿ ಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಇಲಾಖೆಯೇ ಒದಗಿಸಲಿದೆ, ಜೊತೆಗೆ ಏರ್ ಬಸ್ ಪ್ರಯಾಣ ಊಟದ ವೆಚ್ಚವನ್ನು ಕೂಡ ಇಲಾಖೆಯೇ ಭರಿಸಲಿದೆ.

ಜೂನ್ 18 ರಂದು ಚಂದ್ರಕುಮಾರ್ ಎಂಬ ಮುಖ್ಯ ಪೇದೆ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಚ್ಯುತ ಕುಮಾರ್ ಗಣಿ ಎಂಬಾ ನಟೋರಿಯಸ್ ಸರಗಳ್ಳನನ್ನು ಸೆರೆ ಹಿಡಿದಿದ್ದರು, ನಗರ ಪೊಲೀಸ್ ಆಯುಕ್ತ ಟಿ, ಸುನೀಲ್ ಕುಮಾರ್ ಚಂದ್ರ ಕುಮಾರ್ ಅವರಿಗೆ 1 ಲಕ್ಷ ರು ಬಹಮಾನ ನೀಡಿದ್ದಾರೆ, ಸರಗಳ್ಳನನ್ನು ಬೆನ್ನಟ್ಟುವ ವೇಳೆ ಗಾಯಗೊಂಡಿದ್ದ ಚಂದ್ರಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೂ ಕೂಡ ಆರು ತಿಂಗಳು ವೇತನ ಸಹಿತ ಅನಾರೋಗ್ಯ ರಜೆ ಮತ್ತು ದಕ್ಷಿಣ ಭಾರತ ಪ್ರವಾಸಕ್ಕೆ ಅವಕಾಶ ನೀಡಲಾಗಿದೆ.

Comments are closed.