ಕರ್ನಾಟಕ

ಕನ್ನಡದ ಪ್ರಸಿದ್ಧ ನಿರ್ಮಾಪಕರ ಪತ್ನಿ ಪ್ರೇಮಾ ಅಪ್ಪುಗೋಳ ಬಂಧನ!

Pinterest LinkedIn Tumblr


ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ-ಆಪ್‌ ಸೊಸೈಟಿಯ ನಿರ್ದೇಶಕಿ ಪ್ರೇಮಾ ಅಪ್ಪುಗೋಳ ಅವರನ್ನು ಖಡೇಬಜಾರ ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಜು.10ರ ತನಕ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ-ಆಪ್‌ ಸೊಸೈಟಿಯಲ್ಲಿ ಠೇವಣಿ ಇರಿಸಿದ್ದ ಗ್ರಾಹಕರ ಹಣ ವಾಪಸಾತಿ ಮಾಡದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ ಅವರ ಮೇಲೆ ಸಾಕಷ್ಟುದೂರುಗಳು ದಾಖಲಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಆನಂದ ಅಪ್ಪುಗೋಳ, ಸೊಸೈಟಿಯ ವ್ಯವಸ್ಥಾಪಕರು ಹಾಗೂ ಕೆಲ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಇತ್ತೀಚೆಗೆ ಜಾಮೀನು ಮೇಲೆ ಹೊರ ಬಂದಿದ್ದಾಗ, ಸಂಗೊಳ್ಳಿ ರಾಯಣ್ಣ ಸೊಸೈಟಿ ಸಾವಿರಾರು ಗ್ರಾಹಕರು ಅವರ ಮನೆಗೆ ಮುತ್ತಿಗೆ ಹಾಕಿ ತಮ್ಮ ಹಣ ವಾಪಸ್‌ ನೀಡುವಂತೆ ಆಗ್ರಹಿಸಿದ್ದರು. ಇನ್ನು ಆನಂದ ಅಪ್ಪುಗೋಳ ಸಂಗೊಳ್ಳಿ ರಾಯಣ್ಣ ಮಾತ್ರವಲ್ಲ ಭೀಮಾಂಬಿಕಾ ಮಹಿಳಾ ಸೊಸೈಟಿ ಹಾಗೂ ಗಜರಾಜ ಎಂಬ ಹೆಸರಿನಲ್ಲಿ ಸೊಸೈಟಿ ಆರಂಭಿಸಿದ್ದು, ಅವು ಕೂಡ ವ್ಯವಹಾರ ಸ್ಥಗಿತಗೊಳಿಸಿವೆ.

ಇದೀಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಲ್ಲಿ ಠೇವಣಿ ಇಟ್ಟವರ ಹಣ ವಾಪಸ್‌ ಮಾಡದ ಹಿನ್ನೆಲೆಯಲ್ಲಿ ದೂರೊಂದಕ್ಕೆ ಸಂಬಂಧಿಸಿದಂತೆ ಸೊಸೈಟಿ ನಿರ್ದೇಶಕಿ ಹಾಗೂ ಆನಂದ ಅಪ್ಪುಗೋಳ ಪತ್ನಿ ಪ್ರೇಮಾ ಅಪ್ಪುಗೋಳ ಅವರನ್ನು ಶುಕ್ರವಾರ ಖಡೇಬಜಾರ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಗ್ರಾಹಕ ನ್ಯಾಯಾಲಯದ ವಾರಂಟ್‌ ಆಧರಿಸಿ ಪ್ರೇಮಾ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಕುರಿತ ವಿಚಾರಣೆ ಜು.10ರಂದು ಇರುವ ಹಿನ್ನೆಲೆಯಲ್ಲಿ ಅವರಿಗೆ ಜು.10ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

Comments are closed.