ಕರ್ನಾಟಕ

ಎರಡು ವರ್ಷದ ಬಳಿಕ ಕೊಲೆ ಆರೋಪಿ ಬಂಧನ

Pinterest LinkedIn Tumblr


ಬೆಂಗಳೂರು: ವೇತನ ವಿಚಾರವಾಗಿ ಸ್ನೇಹಿತನನ್ನೇ ಕೊಂದು ಎಟಿಎಂ ಕಾರ್ಡ್‌ ಕದೊಯ್ದಿದ್ದ ಆರೋಪಿಯನ್ನು ಎರಡು ವರ್ಷಗಳ ಬಳಿಕ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ರಾಮ್‌ ನಂದನ್‌ (38) ಬಂಧಿತ. ಅರುಣ್‌ ದಾಸ್‌ ಎಂಬಾತನನ್ನು ಹತ್ಯೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಅರುಣ್‌ದಾಸ್‌ ಕೆಲಸ ಕೊಡಿಸುವುದಾಗಿ ಆರೋಪಿಯನ್ನು ನಗರಕ್ಕೆ ಕರೆಸಿಕೊಂಡಿದ್ದ. ಬಳಿಕ ಇಬ್ಬರು ಟ್ಯಾನರಿ ರಸ್ತೆಯ ಪಿಜಿಯಲ್ಲಿ ವಾಸವಿದ್ದರು. ಅರುಣ್‌ ತಾನು ಕೆಲಸ ಮಾಡುತ್ತಿದ್ದ ಬಾಣಸವಾಡಿಯ ಲೇದರ್‌ ಕಾರ್ಖಾನೆಯಲ್ಲಿ ರಾಮಗೂ ಕೆಲಸ ಕೊಡಿಸಿದ್ದ. ಕೆಲಸಕ್ಕೆ ಸೇರಿ 2 ತಿಂಗಳಾದರು ವೇತನ ನೀಡಿರಲಿಲ್ಲ. ಇದೇ ವಿಚಾರಕ್ಕೆ ಅರುಣ್‌ ಜತೆ ಜಗಳ ಮಾಡಿದ ರಾಮ್‌ ಕೋಪಗೊಂಡು ಕೊಲೆಗೈದು ಶವವನ್ನು ಕೊಠಡಿಯಲ್ಲಿ ಬಚ್ಚಿಟ್ಟು, ಎಟಿಎಂ ಕಾರ್ಡ್‌ ಕಳವು ಮಾಡಿ ಪಾರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳದ ಕಠ್ಮಂಡು ಮೂಲಕ ತಲೆಮರೆಸಿಕೊಂಡಿದ್ದ ರಾಮ್‌ನಂದನ್‌ ಮೊಬೈಲ್‌ ಬಳಸುತ್ತಿರಲಿಲ್ಲ. ಹೀಗಾಗಿ ಆತನ ಬಂಧನ ಪೊಲೀಸರಿಗೆ ತಲೆ ನೋವಾಗಿತ್ತು. ಇನ್ನು ಸ್ನೇಹಿತನ ಎಟಿಎಂ ಕಾರ್ಡ್‌ ಕಳವು ಮಾಡಿದ್ದ ಎಂದಾದರೂ ಬಳಸುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಪೊಲೀಸರು ಅರುಣ್‌ದಾಸ್‌ನ ಎಸ್‌ಬಿಐ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸದೆ ವಹಿವಾಟಿನ ಮೇಲೆ ನಿಗಾವಹಿಸಿದ್ದರು.

ಆರೋಪಿ ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದ ನವನಗರ್‌ ಬಳಿ ಚಪ್ಪಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಈ ವೇಳೆ ಕಳವು ಮಾಡಿದ್ದ ಎಟಿಎಂ ಕಾರ್ಡ್‌ನ್ನು ಬಳಸಿದ್ದಾನೆ. ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿ ಬಂಧಿಸಿದ್ದು, ಶನಿವಾರ ಕೋರ್ಟ್‌ಗೆ ಹಾಜರು ಪಡಿಸಲಾಗುವುದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.