ಕರ್ನಾಟಕ

ಬೆಂಗಳೂರಿನಲ್ಲಿ ಎಟಿಎಂ ಹಲ್ಲೆಕೋರ ಮಧುಕರ್​ ರೆಡ್ಡಿ ವಿರುದ್ಧ ಚಾರ್ಜ್​ ಶೀಟ್​ ಸಲ್ಲಿಸಿದ ಪೊಲೀಸರು

Pinterest LinkedIn Tumblr

ಬೆಂಗಳೂರು: ರಾಜಧಾನಿಯ ಕಾರ್ಪೊರೇಷನ್​ ಬ್ಯಾಂಕ್​ ಎಟಿಎಂನಲ್ಲಿ ಜ್ಯೋತಿ ಉದಯ್​ ಎಂಬುವವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಧುಕರ್​ ರೆಡ್ಡಿ ವಿರುದ್ಧ ಪೊಲೀಸರು ಚಾರ್ಜ್​ ಶೀಟ್​ ಸಲ್ಲಿಸಿದ್ದಾರೆ.

ಬೆಂಗಳೂರಿನ 6ನೇ ಎಸಿಎಂಎಂ ನ್ಯಾಯಾಲಯಕ್ಕೆ 217 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿರುವ ಜೆ.ಜೆ ನಗರ ಪೊಲೀಸರು ಎಟಿಎಂ ಕೇಂದ್ರದಲ್ಲಿ ನಡೆದ ಹಲ್ಲೆ ಪ್ರಕರಣದ ವಿವರ, ಆರೋಪಿ ಮಧುಕರ್​ ರೆಡ್ಡಿಯ ಪೂರ್ವಾಪರ ಮತ್ತು ವಿಧಿಸಬೇಕಾದ ಶಿಕ್ಷೆಯನ್ನು ಉಲ್ಲೇಖಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಜ್ಯೋತಿ ಉದಯ್​, ಅವರ ಸಿಮ್​ ಬಳಸಿದ್ದ ರಮಣ, ಆರೋಪಿ ಮಧುಕರ್ ನಿಂದ ಜ್ಯೋತಿ ಮೊಬೈಲ್ ಖರೀದಿಸಿದ್ದ ಹಿಂದೂಪುರ ಅಬ್ದುಲ್​ ಗಫಾರಿ ಸೇರಿದಂತೆ 41 ಸಾಕ್ಷಿಗಳ ವಿಚಾರಣೆ ನಡೆಸಿರುವ ಪೊಲೀಸರು ಐಪಿಸಿ ಸೆಕ್ಷನ್​ 397, 307, 326, 342, 201, 75ರ ಅಡಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಐಪಿಸಿ 397ರ ಪ್ರಕಾರ ಮಾರಣಾಂತಿಕ ಹಲ್ಲೆ ನಡೆಸಿ ರಾಬರಿ ಅಥವಾ ಡಾಕಾಯಿತಿ, ಸೆಕ್ಷನ್​ 307ರ ಪ್ರಕಾರ ಕೊಲೆಯತ್ನ, ಸೆಕ್ಸನ್​ 326- ಮಾರಕಾಸ್ತ್ರ ಬಳಸಿ ಹಲ್ಲೆ, ಸೆಕ್ಷನ್​ 342- ಅಕ್ರಮವಾಗಿ ಒತ್ತೆಯಾಳಾಗಿರಿಸಿಕೊಂಡಿರುವುದು, ಸೆಕ್ಷನ್​ 201-ಸಾಕ್ಷಿನಾಶದ ಹಿನ್ನೆಲೆಯಲ್ಲಿ ಆರೋಪಿ ಮಧುಕರ್​ ರೆಡ್ಡಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಕೋರಿದ್ದಾರೆ.

ಪ್ರಾಣ ತೆಗೆದರು ಹಣ ಕೊಡಲಾರೆ ಎಂದಿದ್ದ ಜ್ಯೋತಿ

ಜ್ಯೋತಿ ಉದಯ್​​ ಅವರ ಮೇಲೆ ಹಲ್ಲೆ ನಡೆಸುವುದಕ್ಕೂ ಎರಡು ದಿನ ಮೊದಲು ಬೆಂಗಳೂರಿಗೆ ಬಂದಿದ್ದ ಮಧುಕರ್​ ರೆಡ್ಡಿ, ಹಣವಿಲ್ಲದೇ ಎರಡು ದಿನಗಳಿಂದ ಊಟವಿಲ್ಲದೇ ನರಳಿದ್ದ. ಆಗ ಆತ ಕಣ್ಣು ಹಾಕಿದ್ದೇ ಎಟಿಎಂಗಳ ಮೇಲೆ. ಎಟಿಎಂಗೆ ಯಾರಾದರೂ ಹಣ ಡ್ರಾ ಮಾಡಲು ಬಂದರೆ ಅವರನ್ನು ಬೆದರಿಸಿ ಹಣ ಕಸಿಯುವುದು ಮಧುಕರ್​ನ ಯೋಜನೆಯಾಗಿತ್ತು. ಅದರಂತೆ ಅಂದು ಬೆಳ್ಳಂಬೆಳಗ್ಗೆಯೇ ಜ್ಯೋತಿ ಉದಯರ್​ ಅವರು ಎಟಿಎಂ ಒಳಗೆ ಪ್ರವೇಶಿಸಿದ್ದರು. ಇದಕ್ಕಾಗಿಯೇ ಹೊಂಚು ಹಾಕಿ ಕುಳಿತಿದ್ದ ಮಧುಕರ್​, ಕೂಡಲೇ ತಾನೂ ಒಳಗೆ ನುಗ್ಗಿ ಶೆಟರ್ ಎಳೆದಿದ್ದ. ತನ್ನ ಬ್ಯಾಗ್​ನಲ್ಲಿದ್ದ ನಕಲಿ ಪಿಸ್ತೂಲ್​ ಅನ್ನು ಹೊರ ತೆಗೆದು ಹಣ ನೀಡುವಂತೆ ಬೆದರಿಸಿದ್ದ. ಆಗ ಜ್ಯೋತಿ ಅವರು ಹಣ ನೀಡಲು ನಿರಾಕರಿಸಿದ್ದರು. ನಂತರ ಕತ್ತು ಹಿಸುಕಿ ಪಕ್ಕಕ್ಕೆ ತಳ್ಳಿ ಹಣ ಕೊಡುವಂತೆ ಜೋರಾಗಿ ಕೇಳಿದ್ದಾನೆ. ಆಗ ಜ್ಯೋತಿ, ತಾನು ಸತ್ತರೂ ಹಣ ಕೊಡುವುದಿಲ್ಲ ಎಂದಿದ್ದಾರೆ. ಹಣ ಕೊಡದೇ ಇದ್ದಾಗ ತನ್ನ ಬ್ಯಾಗ್​ನಲ್ಲಿದ್ದ ಮಚ್ಚನ್ನು ತೆಗೆದಿದ್ದ ಮಧುಕರ್​, ಜ್ಯೋತಿ ಅವರ ತಲೆ, ಮುಖದ ಮೇಲೆ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಜ್ಯೋತಿ ಕೆಳೆಗೆ ಬಿದ್ದಿದ್ದಾರೆ. ಜ್ಯೋತಿ ಅವರ ವೇಲ್​ನಿಂದಲೇ ರಕ್ತವನ್ನು ಒರೆಸಿಕೊಂಡು ಮಧು. ಮಚ್ಚನ್ನು ಬ್ಯಾಗ್​ನಲ್ಲಿ ಹಾಕಿಕೊಂಡು, ಜ್ಯೋತಿ ಅವರ ಬ್ಯಾಗ್​ನಲ್ಲಿದ್ದ 200 ರೂ ಹಣ, ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್​, ಕಾಗದ, ಮೊಬೈಲ್ ಫೋನ್​ಗಳನ್ನು ತೆಗೆದುಕೊಂಡು ಮೆಜೆಸ್ಟಿಕ್​ಗೆ ಹೋಗಿದ್ದ.

ಬಸ್​ ಹತ್ತಿದವನೇ ಮೊಬೈಲ್ ಫೋನ್​ನಲ್ಲಿದ್ದ ಸಿಮ್ ತೆಗೆದು ಸೀಟಿನ ಕೆಳಗೆ ಎಸೆದಿದ್ದ. ಬ್ಯಾಗ್​ನಲ್ಲಿ ತೆಗೆದುಕೊಂಡಿದ್ದ ಎರಡು ಎಟಿಎಂ ಕಾರ್ಡ್​ಗಳ ಪಿನ್​ ತಿಳಿಯದ ಹಿನ್ನೆಲೆಯಲ್ಲಿ ಅವುಗಳನ್ನು ಕಸದ ಬುಟ್ಟಿಗೆ ಎಸೆದಿದ್ದ. ನಂತರ ರೈಲ್ವೆ ನಿಲ್ದಾಣಕ್ಕೆ ಬಂದು ಹಿಂದೂಪುರಕ್ಕೆ ತೆರಳಿದ್ದ. ಅಲ್ಲಿನ ಮೊಬೈಲ್ ಶಾಪ್​ವೊಂದರಲ್ಲಿ ಜ್ಯೋತಿ ಅವರ ಮೊಬೈಲ್​ ಅನ್ನು 500 ರೂ. ಗೆ ಮಾರಾಟ ಮಾಡಿದ್ದ.

ಎಟಿಎಂ ಹಲ್ಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದನ್ನು ಗಮನಿಸಿದ್ದ ಮಧುಕರ್​ ತನ್ನ ಚಹರೆ ಬದಲಿಸಲು ತಲೆ ಬೋಳಿಸಿಕೊಂಡಿದ್ದ ಎಂದು ಚಾರ್ಜ್​ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಮಧುಕರ ರೆಡ್ಡಿಯ ರಕ್ತ ಚರಿತ್ರೆ

ಮಧುಕರ್​ ರೆಡ್ಡಿ ಆಂಧ್ರಪ್ರದೇಶದ ಮದನಪಲ್ಲಿಯವನಾಗಿದ್ದು ತನ್ನ ಹಾಗೂ ದೊಡ್ಡಪ್ಪನ ಮಕ್ಕಳ ಜತೆಗಿದ್ದ ವೈಷಮ್ಯ, ದೊಡ್ಡಪ್ಪನ ಮಗನನ್ನು ಬಾಂಬ್​ ಹಾಕಿ ಕೊಂದದ್ದು, ಇದರಿಂದ ತನ್ನ ತಂದೆ ಕಾನೂನಿನ ಸಂಕಷ್ಟಕ್ಕೆ ಗುರಿಯಾಗಿದ್ದು, ತನ್ನ ಕುಟುಂಬದವರನ್ನು ಸಂಕಷ್ಟದಿಂದ ಪಾರು ಮಾಡಲು ಹಣ ಹೊಂದಿಸಲು ಮುಂದಾಗಿದ್ದು, ಅದಕ್ಕಾಗಿ ಅಪರಾಧ ಕೃತ್ಯಗಳಿಗೆ ಕೈ ಹಾಕಿದ್ದು, ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬೆಂಗಳೂರಿನಲ್ಲಿ ಜ್ಯೋತಿ ಅವರ ಮೇಲೆ ನಡೆಸಿದ ಹಲ್ಲೆ, ಆ ನಂತರದಲ್ಲೂ ನಡೆದ ಅಪರಾಧ ಕೃತ್ಯಗಳನ್ನು ಆರೋಪಿ ಮಧುಕರ ರೆಡ್ಡಿ ಪೊಲೀಸರ ಬಳಿ ವಿವರವಾಗಿ ಹೇಳಿದ್ದಾನೆ. ಮಧುಕರ ರೆಡ್ಡಿಯ ಹಿನ್ನೆಲೆ ರಕ್ತ ಚರಿತ್ರೆಯಾಗಿರುವುದು ಆತನ ಹೇಳಿಕೆಗಳಿಂದಲೇ ಬಯಲಾಗಿದೆ.

Comments are closed.