ಕರ್ನಾಟಕ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಬೆಳಗಾವಿಯ ಗೋಕಾಕ್-ಗೊಡಚಿನಮಲ್ಕಿ ಜಲಪಾತ

Pinterest LinkedIn Tumblr

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಪಶ್ವಿಮಘಟ್ಟ ಹಾಗೂ ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿಟ್ಟುಬಿಡದೇ ಮಳೆ ಸುರಿಯುತ್ತಿರುವುದರಿಂದ ನದಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಗೋಕಾಕ್ ಜಲಪಾತ ಹಾಗೂ ಗೊಡಚಿನಮಲ್ಕಿ ಜಲಪಾತಗಳು ಮೈದುಂಬಿಕೊಂಡಿವೆ. ಸಾವಿರಾರು ಪ್ರವಾಸಿಗರು ಧುಮ್ಮಕ್ಕಿ ಹರಿಯುವ ಜಲಪಾತವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

ಅಮೆರಿಕಾದ ನಯಾನಗರ ಜಲಪಾತವನ್ನ ಹೋಲುವ ಗೋಕಾಕ್ ಜಲಪಾತ

ಗೋಕಾಕ್ ಜಲಪಾತ ಅಮೆರಿಕಾದ ನಯಾನಗರ ಜಲಪಾತವನ್ನ ಹೋಲುವುದರಿಂದ ಇದನ್ನ ಭಾರತದ ನಯಾನಗರ ಜಲಪಾತ ಎಂದು ಕರೆಯುತ್ತಾರೆ. ಕರ್ನಾಟಕದ ಎರಡನೇ ಅತಿ ದೊಡ್ಡ ಜಲಪಾತ ಎಂಬ ಹೆಗ್ಗಳಿಕೆ ಈ ಜಲಪಾತದ್ದು, ಘಟಪ್ರಭಾ ನದಿಯಿಂದ ಉಂಟಾಗುವ ಈ ಜಲಪಾತ 180ಅಡಿ ಎತ್ತರದಿಂದ ಧುಮ್ಮುಕುತ್ತದೆ. ಇದನ್ನ ನೋಡುವುದೇ ಒಂದು ಅದ್ಭುತ. ಇದರ ಜೊತೆಗೆ ಇಲ್ಲಿ ತೂಗು ಸೇತುವೆ ಇದ್ದು, ಇದರ ಮೇಲಿಂದ ನಿಂತು ಜಲಪಾತ ವೀಕ್ಷಣೆ ಮಾಡಬಹುದು. ಸದ್ಯ ಮಳೆ ಬೀಳುತ್ತಿರುವುದರಿಂದ ಜಲಪಾತ ಮೈತುಂಬಿಕೊಂಡಿದ್ದು, ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ.

ಗೊಡಚಿನಮಲ್ಕಿ ಜಲಪಾತ

ಗೋಕಾಕ್ ಫಾಲ್ಸ್ ನೋಡಿದವರು ಗೋಡಚಿನಮಲ್ಕಿ ಫಾಲ್ಸ್ ನೋಡಲೇಬೇಕು. ಗೋಕಾಕ್ ಫಾಲ್ಸ್ ನಿಂದ ಕೇವಲ 9 ಕಿಲೋಮೀಟರ್ ಕ್ರಮಿಸಿದರೆ, ಗೊಡಚಿನಮಲ್ಕಿ ಜಲಪಾತ ಸಿಗುತ್ತದೆ. ಮಾರ್ಕಂಡೇಯ ನದಿಗೆ ಉಂಟಾಗಿರುವ ನೈಸರ್ಗಿಕ ಜಲಪಾತ ಇದು. ಕಲ್ಲಿನ ಮೇಲೆ ಕೆಂಪು ಮಿಶ್ರಿತ ನೀರು ಧುಮ್ಮುಕ್ಕಿ ಹರಿಯುವ ಮೂಲಕ ಆಕರ್ಷಿಸುತ್ತಿದೆ. ಒಂದು ತಿಂಗಳಿಂದ ಈ ಜಲಪಾತ ಮೈದುಂಬಿಕೊಂಡು ಹರಿಯುತ್ತಿದ್ದು, ತಂಡೋಪತಂಡವಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಲಪಾತವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

Comments are closed.