ಕರ್ನಾಟಕ

ಶವ ಪರೀಕ್ಷೆಯಲ್ಲಿ ಕ್ಲೀನರ್‌ ಸಾವಿನ ರಹಸ್ಯ ಬಯಲು!

Pinterest LinkedIn Tumblr


ಬೆಂಗಳೂರು: ಲಾರಿ ಚಾಲಕ ಹಾಕಿದ ಹಠಾತ್‌ ಬ್ರೇಕ್‌, ಕ್ಲೀನರ್‌ನ ಜೀವ ಬಲಿತಗೆದುಕೊಂಡಿದೆ.

ಹಾಸನದ ಜಯಂತಿನಗರದ ಕಾಂತರಾಜು (45) ಮೃತ ದುರ್ಧೈವಿ. ಆದರೆ ಈ ಸತ್ಯ ಸಂಗತಿ ಗೊತ್ತಾಗಿದ್ದು, ಶವ ಪರೀಕ್ಷೆಯಲ್ಲಿ ಕಂಡ ದತ್ತಾಂಶಗಳಿಂದ ಎಂಬುದು ಅಚ್ಚರಿಯ ಸಂಗತಿ.

ಡ್ರೈವರ್‌ ಆರ್‌. ಸುರೇಶ್‌ ಅಚಾನಕ್‌ ಆಗಿ ಬ್ರೇಕ್‌ ಹಾಕಿದ ಕಾರಣ, ಕ್ಯಾಬಿನ್‌ನಲ್ಲಿ ಮಲಗಿದ್ದ ಕ್ಲೀನರ್‌ ಕಾಂತರಾಜು, ಎಂಜಿನ್‌ ಬಾಕ್ಸ್‌ ಮೇಲೆ ಬಿದ್ದಿದ್ದಾರೆ. ಆ ಕ್ಷಣಕ್ಕೆ ಸುಧಾರಿಸಿಕೊಂಡ ಅವರು, ದೇಹದ ಯಾವುದೇ ಭಾಗಕ್ಕೆ ಗಾಯಗಳಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮತ್ತೆ ಕ್ಯಾಬಿನ್‌ನಲ್ಲಿ ಮಲಿಗಿದ್ದಾರೆ.

ಮರುದಿನ ಬೆಳಗ್ಗೆ ತೀವ್ರ ಎದೆ ನೋವು ಎಂದು ಚಡಪಡಿಸಿದ ವೇಳೆ, ಡ್ರೈವರ್‌ 108ಕ್ಕೆ ಕರೆ ಮಾಡಿದ್ದಾರೆ. ಆದರೆ ವೈದ್ಯ ಸಿಬ್ಬಂದಿ ಕಾಂತರಾಜುವನ್ನು ಪರೀಕ್ಷಿಸಿ, ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ತುಮಕೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತೆಯೇ ಕಾಂತರಾಜು ದೇಹವನ್ನು ನೆಲಮಂಗಲ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಜೂನ್‌ 9 ರಂದು ಈ ಘಟನೆ ನಡೆದಿದ್ದು, ಜೂ.30ಕ್ಕೆ ಶವ ಪರೀಕ್ಷೆಯ ಫಲಿತಾಂಶ ನೋಡಿ ಪೊಲೀಸರು ಅಚ್ಚರಿಗೊಳಗಾಗಿದ್ದಾರೆ. ಹೃದಯದ ಕವಾಟಗಳಲ್ಲಿ ತೀವ್ರ ರಕ್ತಸ್ರಾವ, ಶಾಕ್‌ ಹಾಗೂ ಉಸಿರಾಟದ ಸಮಸ್ಯೆಯಿಂದ ಸಾವು ಸಂಭವಿಸಿದೆ. ಅಂತೆಯೇ ಹೃದಯಕ್ಕೆ ಘಾಸಿಯಾಗಿರುವುದು ಸಾವನ್ನಪ್ಪಲು ಪ್ರಮುಖ ಕಾರಣ ಎಂದು ವರದಿ ಸಿಕ್ಕಿದೆ. ಈ ಬಗ್ಗೆ ಮತ್ತಷ್ಟು ವಿವರ ಕೇಳಿದ ಪೊಲೀಸರು, ಕಾಂತರಾಜ ಸಾವಿನ ರಹಸ್ಯ ಬಯಲು ಮಾಡಲು ಯಶಸ್ವಿಯಾದರು.

ಶವ ಪರೀಕ್ಷೆಯ 2ನೇ ವರದಿಯಲ್ಲಿ, ಕಾಂತರಾಜು ಅವರ ಪಕ್ಕೆಲುಬುಗಳು ಮುರಿದಿರುವುದು ಗೊತ್ತಾಗಿದೆ. ಈ ವೇಳೆ ಚಾಲಕ ಸುರೇಶ್‌ ಅವರನ್ನು ವಿಚಾರಣೆ ನಡೆಸಿದ ವೇಳೆ, ಜೂ.8ರಂದು ರಾತ್ರಿ ತುಮಕೂರು ರಸ್ತೆಯಲ್ಲಿ ಕಾರೊಂದಕ್ಕೆ ಸಂಭವಿಸಬಹುದಾಗಿದ್ದ ಅಫಘಾತವನ್ನು ತಪ್ಪಿಸಲು ಬ್ರೇಕ್‌ ಹಾಕಿದ್ದು, ಆ ವೇಳೆ ಕಾಂತರಾಜು ಕ್ಯಾಬಿನ್‌ನಿಂದ ಎಂಜಿನ್‌ ಬಾಕ್ಸ್‌ಗೆ ಬಿದ್ದಿರುವ ಘಟನೆಯನ್ನು ವಿವರಿಸಿದರು.

ದೇಹಕ್ಕೆ ಯಾವುದೇ ಗಾಯ ಆಗದೇ ಇದ್ದುದರಿಂದ ಎಲ್ಲವೂ ಸರಿ ಇದೆ ಎಂದು ಮತ್ತೆ ಕ್ಯಾಬಿನ್‌ಗೆ ತೆರಳಿ ಮಲಗಿದರು. ಈ ವೇಳೆ ಎದೆ ನೋವಾಗುತ್ತದೆ ಎಂದಿದ್ದರು. ಆ ದಿನ ಅಲ್ಲೇ ಹತ್ತಿರ ಲಾರಿ ನಿಲ್ಲಿಸಿ ಮಲಗಿದ್ದೇವೆ. ಮಾರನೇ ದಿನ ಬೆಳಗ್ಗೆ ತೀವ್ರ ಎದೆ ನೋವು ಆಗುತ್ತಿದೆ ಎಂದು ಕಾಂತರಾಜು ಹೇಳಿದ್ದು, 108ಕ್ಕೆ ಕರೆ ಮಾಡಿದೆ ಎಂದು ಸುರೇಶ್‌ ನಡೆದ ವಿಚಾರವನ್ನು ತಿಳಿಸಿದ್ದಾರೆ.

ಅಜಾಗರೂಕ ಚಾಲನೆ ಎಂದು ಸುರೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.