ಬೆಂಗಳೂರು:ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಂಭವಿಸಲಿದ್ದು, ವಿದ್ಯಮಾನ ವೀಕ್ಷಣೆಗಾಗಿ ಜನಸಾಮಾನ್ಯರು ಸೇರಿದಂತೆ ವಿಜ್ಞಾನಿಗಳು ಕೂಡಾ ಕಾತುರರಾಗಿದ್ದಾರೆ. ಯಾಕೆಂದರೆ ಇಂದು ರಾತ್ರಿಯ ರಕ್ತವರ್ಣದ ಚಂದಿರನ ದರ್ಶನ ತಪ್ಪಿಸಿಕೊಂಡರೆ, ಇನ್ನು 104 ವರ್ಷ ಕಾಯಬೇಕು!
ಖಗ್ರಾಹ ಚಂದ್ರಗ್ರಹಣ ಇನ್ನು 2123ರಲ್ಲಿ ಸಂಭವಿಸಲಿದೆ. ರಾತ್ರಿ 11.43ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, 2.43ನಿಮಿಷಕ್ಕೆ ಗ್ರಹಣ ಪೂರ್ಣತೆ, ಬೆಳಗಿನ ಜಾವ 3.49ಕ್ಕೆ ಗ್ರಹಣ ಮೋಕ್ಷ ಕಾಲ. ಈ ಅತ್ಯಪರೂಪದ ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಿಸಬಹುದಾಗಿದೆ. ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಖಗ್ರಾಹ ಚಂದ್ರಗ್ರಹಣದಿಂದ ಪ್ರಳಯ ಸಂಭವಿಸುತ್ತದೆ ಎಂಬುದು ಸತ್ಯಕ್ಕೆ ದೂರ ಎಂಬುದಾಗಿ ವಿಜ್ಞಾನಿಗಳ ಸ್ಪಷ್ಟನೆ. ಭಾರತವೂ ಸೇರಿದಂತೆ ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಬ್ಲಡ್ ಮೂನ್ ಕಾಣಿಸಲಿದೆ.
ರಕ್ತವರ್ಣ ಚಂದ್ರ ದರ್ಶನದ ಜೊತೆಗೆ ಶುಕ್ರವಾರ ಸುಮಾರು 15 ವರ್ಷಗಳ ಬಳಿಕ ಮಂಗಳ ಗ್ರಹವೂ ಕೂಡಾ ಭೂಮಿಯ ಅತ್ಯಂತ ಸಮೀಪಕ್ಕೆ ಬರಲಿದೆ. ಇದರಿಂದ ಮಂಗಳ ಗ್ರಹ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿದೆ.
ಚಂದ್ರಗ್ರಹಣದ ಕುರಿತಾಗಿ ಜನರು ಹೆಚ್ಚು ಗಾಬರಿಗೊಳಗಾಗೋದು ಬೇಡ ಎಂಬುದು ಹಲವು ತಜ್ಞರ ಅಭಿಮತ. ಗರ್ಭಿಣಿ ಸ್ತ್ರೀಯರು ಕೂಡಾ ಯಾವುದೇ ಆತಂಕಕ್ಕೆ ಒಳಗಾಗಬಾರದು. ಚಂದ್ರಗ್ರಹಣಕ್ಕೂ, ಹೆರಿಗೆಗೂ ಯಾವುದೇ ಸಂಬಂಧವಿಲ್ಲ.
ಏನಿದು ರಕ್ತಚಂದಿರ:
ಗ್ರಹಣದ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳದೆ ಚದುರಿದಂತೆ ಬೀಳುತ್ತದೆ. ಚಂದ್ರನ ಮೇಲೆ ಬಿದ್ದ ಅಲ್ಪ ಸ್ವಲ್ಪ ಬೆಳಕು ಪರೋಕ್ಷವಾಗಿ ಭೂಮಿಗೆ ಪ್ರತಿಫಲನಗೊಳ್ಳುತ್ತದೆ. ಭೂಮಿಯ ವಾತಾವರಣದಿಂದ ಚಂದ್ರ ಕೆಂಪು ಬಣ್ಣಲ್ಲೆ ತಿರುಗಿದಂತೆ ಗೋಚರಿಸಲಿದೆ.
ವೀಕ್ಷಣೆಗೆ ಅವಕಾಶ:
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಲ್ಲಿ ರಾತ್ರಿ 11.30ರಿಂದ 3.30ರ ವರೆಗೆ ಈ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ ಎಂದು ನಿರ್ದೇಶಕ ಡಾಣ ಕೆ.ವಿ. ರಾವ್ ತಿಳಿಸಿದ್ದಾರೆ. ಉಡುಪಿ ಪರ್ಕಳದ ಸ್ವಾಗತ್ ಹೊಟೇಲ್ ಬಳಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Comments are closed.