ಬೆಂಗಳೂರು: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳ ಬಾಗಿಲುಗಳು ಇಂದು ಸಂಜೆಯಿಂದ ಮುಚ್ಚಲಿದೆ, ಮತ್ತೊಂದೆಡೆ ವಿಧಾನಸೌಧ, ವಿಕಾಸಸೌಧ ಕೂಡಾ ಖಾಲಿ, ಖಾಲಿ ಇದ್ದು ಬಿಕೋ ಎನ್ನುತ್ತಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.
ವಿಧಾನಸೌಧದಲ್ಲಿ ಬಹುತೇಕ ಸಚಿವರು, ಶಾಸಕರ ಕೊಠಡಿಗಳು ಖಾಲಿ, ಖಾಲಿಯಾಗಿದೆ. ವಿಧಾನಸೌಧದ ಪಾರ್ಕಿಂಗ್ ಸ್ಥಳದಲ್ಲಿಯೂ ವಾಹನಗಳಿಲ್ಲದೆ ಬಿಕೋ ಎನ್ನುತ್ತಿದೆ.
ವಿಧಾನಸೌಧ, ವಿಕಾಸೌಧದಲ್ಲಿನ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗಿದ್ದಾರೆ. ಸಚಿವರು, ಶಾಸಕರು ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ಮೊರೆ ಹೋಗಿದ್ದಾರೆ.
ಕೇತುಗ್ರಸ್ಥ ಚಂದ್ರಗ್ರಹಣದಿಂದ ಕೆಲವು ರಾಶಿಯವರಿಗೆ ಕೆಡುಕು ಉಂಟಾಗಲಿದೆ ಎಂಬ ಜ್ಯೋತಿಷಿಗಳ ಹೇಳಿಕೆಯಿಂದ ಆತಂಕಗೊಂಡಿರುವ ರಾಜಕೀಯ ನಾಯಕರು ಗುಟ್ಟಾಗಿ ಹೋಮ, ಹವನ ಪೂಜೆಯಲ್ಲಿ ತೊಡಗಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಗುರುವಾರ ತಿರುಪತಿಗೆ ಭೇಟಿ ನೀಡಿದೆ. ಸಚಿವ ಎಚ್.ಡಿ.ರೇವಣ್ಣ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಹೋಮ ಆಯೋಜಿಸಿದ್ದಾರೆ.
ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಶುಕ್ರವಾರ ರಾತ್ರಿ 11.45ಕ್ಕೆ ಆರಂಭವಾಗಲಿದೆ. 1ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಮುಂಜಾನೆ 3.49ಕ್ಕೆ ಗ್ರಹಣ ಮೋಕ್ಷ ಕಾಲ.
Comments are closed.