ಕರ್ನಾಟಕ

ಕ್ಯಾಬ್‌ ಕದ್ದು ಕಿಡ್ನ್ಯಾಪ್‌ ಮಾಡಲು ಬಳಕೆ

Pinterest LinkedIn Tumblr


ಬೆಂಗಳೂರು: ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡವನನ್ನು ಕೊಲೆ ಮಾಡಲು ಸುಪಾರಿ ನೀಡಿದ ಫೈನಾನ್ಷಿಯರ್‌ ಹಾಗೂ ಆತನಿಂದ ಸುಪಾರಿ ಪಡೆದ ಮೂವರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೆಲ ತಾಸುಗಳಲ್ಲೇ ನಡೆಯಲಿದ್ದ ಸಂಭವನೀಯ ಕೊಲೆ ಪ್ರಕರಣವೊಂದನ್ನು ತಪ್ಪಿಸಿದ್ದಾರೆ.

ಸಿದ್ದಾಪುರದ ಗುಟ್ಟೆಪಾಳ್ಯದ ನಿವಾಸಿ ಫೈನಾನ್ಷಿಯರ್‌ ಲಕ್ಷ ್ಮಣ್‌(38), ಸುಪಾರಿ ಪಡೆದಿದ್ದ ಆನೇಕಲ್‌ನ ಮಣಿ(30), ಜೆ.ಪಿ ನಗರದ ರೂಪೇಶ್‌(33) ಮತ್ತು ಸೆಲ್ವರಾಜ್‌(33) ಬಂಧಿತರು. ಆನೇಕಲ್‌ ನಿವಾಸಿ ಪೆದ್ದಣ್ಣ ಎಂಬುವವರ ಕ್ಯಾಬ್‌ ಕದ್ದಿದ್ದ ಆರೋಪಿಗಳು, ಅರಕೆರೆಯ ಬೀಡಾ ಅಂಗಡಿ ಮಾಲೀಕ ಶಿವಕುಮಾರ್‌ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದರು.

ಕ್ಯಾಬ್‌ ಕಳವು: ಜು.25ರಂದು ರಾತ್ರಿ 11 ಗಂಟೆ ಸುಮಾರಿಗೆ ಕಂಪನಿಯೊಂದರ ನೌಕರರನ್ನು ಮೈಕೋ ಲೇಔಟ್‌ ಸೇರಿದಂತೆ ಇನ್ನಿತರ ಕಡೆ ಡ್ರಾಪ್‌ ಮಾಡಿ ಪೆದ್ದಣ್ಣ ಮನೆಗೆ ಹಿಂದಿರುಗುತ್ತಿದ್ದರು. ಹೊಮ್ಮದೇವನಹಳ್ಳಿ ಗ್ರಾಮದ ಸಿ.ಕೆ ಪಾಳ್ಯ ತಿರುವಿನಲ್ಲಿ ತೆರಳುವಾಗ ಪೊದೆಯಲ್ಲಿ ಅವಿತು ಕುಳಿತಿದ್ದ ಮೂವರು ಆರೋಪಿಗಳು, ಏಕಾಏಕಿ ಕ್ಯಾಬ್‌ ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರಲ್ಲದೆ, ಕ್ಯಾಬ್‌ನೊಂದಿಗೆ ಪರಾರಿಯಾಗಿದ್ದರು. ಈ ಕುರಿತು ಪೆದ್ದಣ್ಣ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದರು.

ತನಿಖೆ ವೇಳೆ ಕೊಲೆಗೆ ಸ್ಕೆಚ್‌ ಬೆಳಕಿಗೆ: ಕಾರು ದರೋಡೆ ಕೇಸ್‌ ಪತ್ತೆಗೆ ತನಿಖೆ ನಡೆಸುತ್ತಿದ್ದ ಹುಳಿಮಾವು ಪೊಲೀಸರು, ಜು.26ರಂದು ತಲಘಟ್ಟಪುರ ನೈಸ್‌ ರಸ್ತೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕ್ಯಾಬ್‌ ಪತ್ತೆ ಮಾಡಿದ್ದಾರೆ. ಈ ವೇಳೆ ಮೂವರು ಆರೋಪಿಗಳ ಜತೆಗೆ ಬೀಡಾ ಅಂಗಡಿ ಮಾಲೀಕ ಶಿವಕುಮಾರ್‌ ಎಂಬಾತ ಇದ್ದ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಶಿವಕುಮಾರ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ.

ಸುಪಾರಿ ಕಿಲ್ಲರ್ಸ್‌: ಫೈನಾನ್ಷಿಯರ್‌ ಆಗಿರುವ ಲಕ್ಷ ್ಮಣ್‌ 10 ವರ್ಷದ ಹಿಂದೆ ವಿವಾಹವಾಗಿದ್ದ. ಈತನ ಪತ್ನಿ ನಗರದ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವಿವಾಹವಾದ ಒಂದು ವರ್ಷದಿಂದಲೂ ಅರೆಕೆರೆಯ ಬೀಡಾ ಅಂಗಡಿ ಮಾಲೀಕ ಶಿವಕುಮಾರ್‌ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಕೆಲ ದಿನಗಳ ನಂತರ ಪತಿಯನ್ನು ತೊರೆದು ಶಿವಕುಮಾರ್‌ ಜತೆ ವಾಸ ಮಾಡಲು ಆರಂಭಿಸಿದ್ದಳು. ಇದರಿಂದ ಲಕ್ಷ್ಮಣ್‌ ಕುಪಿತಗೊಂಡಿದ್ದ. ಕಳೆದ ತಿಂಗಳು ಲಕ್ಷ ್ಮಣ್‌ ಬನ್ನೇರುಘಟ್ಟದಲ್ಲಿರುವ ತನ್ನ ಸಂಬಂಧಿಕರ ನಿವೇಶನಕ್ಕೆ ಭೇಟಿ ನೀಡಿದ್ದ. ಅಲ್ಲಿ ನಿವೇಶನ ಸ್ವಚ್ಛಗೊಳಿಸಲು ಬಂದಿದ್ದ ಆರೋಪಿ ಮಣಿ ಪರಿಚಯವಾಗಿತ್ತು. ತನ್ನ ವಿರುದ್ಧ 2 ಕೊಲೆ ಪ್ರಕರಣ ದಾಖಲಾಗಿವೆ ಎಂದು ಮಣಿ ತಿಳಿಸಿದ್ದ. ಮಣಿ ಮೊಬೈಲ್‌ ನಂಬರ್‌ ಪಡೆದ ಲಕ್ಷ ್ಮಣ್‌ ಸುಪಾರಿ ಬಗ್ಗೆ ಮಾತುಕತೆ ನಡೆಸಿದ್ದ. ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬನನ್ನು ಮುಗಿಸಬೇಕಿದೆ. ನನ್ನ ಪತ್ನಿ ದೂರವಾದ ಕಾರಣ ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದಾರೆ. ಇದಕ್ಕೆ ಕಾರಣವಾಗಿರುವ ಶಿವಕುಮಾರ್‌ನನ್ನು ಮುಗಿಸಬೇಕು ದು 3 ಲಕ್ಷ ರೂ.ಗೆ ಸುಪಾರಿ ಕೊಟ್ಟು 7 ಸಾವಿರ ರೂ. ಮುಂಗಡ ಕೊಟ್ಟಿದ್ದ.

ಅಪಹರಿಸಿ ಕೊಲೆ ಸ್ಕೆಚ್‌: ಮಣಿ ತನ್ನ ಸಹಚರರಾದ ರೂಪೇಶ್‌ ಮತ್ತು ಸೆಲ್ವರಾಜ್‌ ಜತೆ ಸೇರಿ ಕದ್ದ ಕಾರಿನಲ್ಲಿ ಶಿವಕುಮಾರ್‌ನನ್ನು ಅಪಹರಿಸಿ, ಬನ್ನೇರುಘಟ್ಟದ ನಿರ್ಜನ ಪ್ರದೇಶದ ಅರಣ್ಯಕ್ಕೆ ಕರೆದೊಯ್ದು ಕೊಲೆ ಮಾಡಲು ಸಂಚು ರೂಪಿಸಿದ್ದ. ಸಂಚಿನಂತೆ ಪೆದ್ದಣ್ಣನ ಕಾರನ್ನು ಕದ್ದು, ರಾತ್ರಿ 11.30ರ ಸುಮಾರಿಗೆ ಬೀಡಾ ಅಂಗಡಿ ಮುಚ್ಚಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಶಿವಕುಮಾರ್‌ನನ್ನು ಅಪಹರಿಸಿದ್ದರು. ಆದರೆ, ಕೊಲೆ ನಡೆಯುವಷ್ಟರಲ್ಲೇ ಪೊಲೀಸರು ಕಾರ್ಯಾಚರಣೆಯಿಂದ ಶಿವಕುಮಾರ್‌ನ ಪ್ರಾಣ ಉಳಿದಿದೆ. ಬಂಧಿತ ಆರೋಪಿ ಮಣಿ ವಿರುದ್ಧ 2 ಕೊಲೆ, 2 ಕಳವು ಪ್ರಕರಣ ದಾಖಲಾಗಿದ್ದು, ರೂಪೇಶ್‌ ವಿರುದ್ಧ ದರೋಡೆ ಪ್ರಕರಣ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.