ಕರ್ನಾಟಕ

ಮನೆಮನೆಗೆ ಊಟ ತಂದುಕೊಡುವ ಸ್ವಿಗ್ಗಿಯಿಂದ ಮುಂದಿನ ದಿನಗಳಲ್ಲಿ ನಿಮಗೆ ದಿನಸಿ, ಔಷಧವೂ ಲಭ್ಯ

Pinterest LinkedIn Tumblr


ಬೆಂಗಳೂರು: ಆನ್​ಲೈನ್ ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಈಗ ಬೇರೆ ಕ್ಷೇತ್ರಗಳಿಗೂ ಕಾಲಿರಿಸಿದೆ. ಬೆಂಗಳೂರು ಮೂಲದ ಸ್ವಿಗ್ಗಿ ಸಂಸ್ಥೆ ನಮ್ಮ ದೇಶದ ಆಹಾರ ಸರಬರಾಜು ಮಾರುಕಟ್ಟೆಯ ಅಗ್ರಗಣ್ಯನಾಗಿ ಬೆಳೆದಿದೆ. ಇಂಥ ಘಟ್ಟದಲ್ಲೇ ಸ್ವಿಗ್ಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಹೋಟೆಲ್​ನಿಂದ ಆಹಾರ ಸರಬರಾಜು ಮಾಡುವ ಜೊತೆಗೆ ಔಷಧ, ದಿನಸಿ ಮೊದಲಾದ ಸಾಮಾನುಗಳನ್ನೂ ಗ್ರಾಹಕರಿಗೆ ತಲುಪಿಸುವ ಯೋಜನೆ ಹಾಕಿಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ್ದೇ ಮತ್ತೊಂದು ಕಂಪನಿ ಡುಂಜೋ ಈಗಾಗಲೇ ಔಷಧ, ದಿನಸಿ ಸರಬರಾಜು ಮಾರುಕಟ್ಟೆಯಲ್ಲಿದೆ. ಗೂಗಲ್ ಮತ್ತು ಕ್ವಿಕರ್ ಸಂಸ್ಥೆಯ ಬೆಂಬಲ ಹೊಂದಿರುವ ಡುಂಜೋ ಜೊತೆ ಸ್ವಿಗ್ಗಿ ನೇರ ಪೈಪೋಟಿ ನಡೆಸಬೇಕಾಗುತ್ತದೆ.

ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಸ್ವಿಗ್ಗಿಯು ಇದೇ ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರಗಳಲ್ಲಿ ಸಮಗ್ರ ಸರಬರಾಜು ಸೇವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿದೆ. ನಗರದ ಯಾವುದೇ ಅಂಗಡಿ, ಮಳಿಗೆಯಿಂದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಯೂನಿಫೈಡ್ ಡೆಲಿವರಿ ಪ್ಲಾಟ್​ಫಾರ್ಮ್ ರಚಿಸಲಿದೆ. ಈಗಾಗಲೇ, ಗ್ರಾಹಕರ ಮನೆಮನೆಗೆ ವಸ್ತುಗಳನ್ನು ತಲುಪಿಸಬಲ್ಲಂತಹ 55 ಸಾವಿರ ಜನರ ದೊಡ್ಡ ಪಡೆಯೇ ಸ್ವಿಗ್ಗಿ ಬೆನ್ನಿಗಿದೆ. ಕೇವಲ ಹೋಟೆಲ್ ಆಹಾರದ ಸರಬರಾಜಿಗೆ ತಿಂಗಳಿಗೆ 1.4 ಕೋಟಿಯಷ್ಟು ಆರ್ಡರ್​ಗಳು ಸ್ವಿಗ್ಗಿಗೆ ಬರುತ್ತವೆ. ಈಗ ದಿನಸಿ, ಔಷಧ ಮೊದಲಾದ ನಿತ್ಯೋಪಯೋಗಿ ವಸ್ತುಗಳ ಸರಬರಾಜು ಸೇವೆಯೂ ಕ್ಲಿಕ್ ಆದರೆ ಸ್ವಿಗ್ಗಿಯ ಪ್ರೊಫೈಲ್ ಗಣನೀಯ ಪ್ರಮಾಣದಲ್ಲಿ ಏರಲಿದೆ. ಮೇಟುವಾನ್-ಡಿಯಾನ್​ಪಿಂಗ್, ಡಿಎಸ್​ಟಿ ಗ್ಲೋಬಲ್, ನ್ಯಾಸ್ಪರ್ಸ್ ಮತ್ತು ಕೌಟೂ ಮ್ಯಾನೇಜ್ಮೆಂಟ್ ಸಂಸ್ಥೆಗಳ ಮೂಲಕ ಸ್ವಿಗ್ಗಿ 21 ಕೋಟಿ ಡಾಲರ್ (ಸುಮಾರು 1,500 ಕೋಟಿ ರೂ.) ಬಂಡವಾಳ ಪಡೆದಿದೆ.

ಚೀನಾದಲ್ಲಿ ಈಗಾಗಲೇ ಇಂಥ ಸರಬರಾಜು ಸೇವೆ ಬಹಳ ಗಟ್ಟಿಯಾಗಿ ಬೆಳೆದಿದೆ. ಸ್ವಿಗ್ಗಿಗೆ ಬಂಡವಾಳ ಕೊಟ್ಟಿರುವ ಮೇಟುವಾನ್ ಡಿಯಾನ್​ಪಿಂಗ್ ಎಂಬ ಚೀನೀ ಕಂಪನಿ ಈ ಸೇವೆಯಲ್ಲಿ ಅನುಭವಿಯಾಗಿದೆ. ಭಾರತದಲ್ಲಿ ಸ್ವಿಗ್ಗಿಗೆ ಫೈನಾನ್ಸ್ ಮಾಡಿದ ಕಂಪನಿಗಳಲ್ಲಿ ಡಿಯಾನ್​ಪಿಂಗ್ ಕೂಡ ಒಂದು. ಕಾಕತಾಳೀಯವೆಂದರೆ ಡಿಯಾನ್​ಪಿಂಗ್​ನ ಚೀನೀ ವ್ಯವಹಾರದ ಮಾಡೆಲ್​ಗೂ ಸ್ವಿಗ್ಗಿಯ ಭವಿಷ್ಯ ಯೋಜನೆಗೂ ಸಾಕಷ್ಟು ಸಾಮ್ಯತೆ ಇದೆ.

Comments are closed.