ಕರ್ನಾಟಕ

ಉಗ್ರರಿಂದ ಬೆದರಿಕೆ; ವಿಧಾನಸೌಧಕ್ಕೆ ಬ್ಲಾಕ್​ ಕಮಾಂಡೋಗಳ ನೇಮಕಕ್ಕೆ ಕೇಂದ್ರ ಸೂಚನೆ

Pinterest LinkedIn Tumblr

0
ಬೆಂಗಳೂರು: ವಿಧಾನಸೌಧಕ್ಕೆ ಉಗ್ರರಿಂದ ಬೆದರಿಕೆ ಇದೆ ಎಂಬ ಸ್ಫೋಟಕ ಮಾಹಿತಿಯೊಂದು ಕೇಂದ್ರದಿಂದ ಬಂದಿದೆ. ಗುಪ್ತದಳ ವಿಭಾಗವು ಈ ಸೂಚನೆ ನೀಡಿದ್ದು, ಭದ್ರತೆ ಹೆಚ್ಚಿಸುವಂತೆ ಸರಕಾರವನ್ನು ಎಚ್ಚರಿಸಿದೆ. ಭದ್ರತೆ ಬಿಗಿಗೊಳಿಸುವ ಸಲುವಾಗಿ ಬ್ಲ್ಯಾಕ್ ಕಮಾಂಡೋಗಳ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯೂಸ್ 18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಮುಂದಿನ ವಾರದಿಂದ ಬ್ಲಾಕ್ ಕಮಾಂಡೋಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸಿಸಿಟಿವಿ, ಸ್ಕ್ಯಾನರ್​​ಗಳನ್ನು ಪರಿಶೀಲಿಸುವಂತೆಯೂ ಸೂಚನೆ ನೀಡಲಾಗಿದೆ.

ಕುಮಾರಸ್ವಾಮಿ ಹಾಗೂ ಸರಕಾರಕ್ಕೆ ಇಂಥದ್ದೊಂದು ಅಪಾಯದ ಮುನ್ಸೂಚನೆ ಮೊದಲೇ ಇತ್ತಾ? ಕೆಲ ದಿನಗಳಿಂದ ನಡೆದ ಘಟನೆಗಳು ಅದಕ್ಕೆ ಪೂರಕವಾಗಿವೆ. ವಾರದ ಹಿಂದಷ್ಟೇ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಮೇಲೆ ಗರಂ ಆಗಿ ನಿರ್ಬಂಧ ಹೇರಲು ಮುಂದಾಗಿದ್ದರು. ವಿಧಾನಸೌಧದಲ್ಲಿ ಪತ್ರಕರ್ತರಿಗೆ ಪ್ರತ್ಯೇಕ ಕೊಠಡಿ ಕೊಟ್ಟು, ಅಲ್ಲಿಗಷ್ಟೇ ಅವರನ್ನು ಸೀಮಿತಗೊಳಿಸುವ ಚಿಂತನೆಯಲ್ಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಕುಮಾರಸ್ವಾಮಿ ಅವರ ಆ ವರ್ತನೆಯು ಬಹಳ ಟೀಕೆಗೆ ಗುರಿಯಾಗಿತ್ತು. ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಸಿಎಂ ಧಕ್ಕೆ ತರುತ್ತಿದ್ದಾರೆಂಬ ಮಾತೂ ಕೇಳಿಬಂದಿದ್ದವು.

ಇತ್ತೀಚೆಗಷ್ಟೇ ಸಿಎಂ ಕುಮಾರಸ್ವಾಮಿ ಅವರು ಶಕ್ತಿ ಸೌಧಕ್ಕೆ ಬಿಗಿ ಭದ್ರತೆ ಒದಗಿಸಿ ಆದೇಶ ಹೊರಡಿಸಿದ್ದರು. ವಿಧಾನಸೌಧದ ಸುತ್ತ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಸಿಎಂ ಮುಂದಾಗಿದ್ದರು. ಇದಕ್ಕಾಗಿ ಶಕ್ತಿ ಸೌಧಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಉದ್ಯೋಗಸೌಧ, ಎಂ.ಎಸ್.ಬಿಲ್ಡಿಂಗ್, ಲೋಕಾಯುಕ್ತ ಕಚೇರಿ ಸುತ್ತಮುತ್ತ ಬಿಗಿ ಭದ್ರತೆಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಲು ಚಿತ್ತ ಹರಿಸಿದೆ. ಅದಕ್ಕಾಗಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಯಿತು.

ವಿಧಾನಸೌಧಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಉದ್ಯೋಗ ಸೌಧದ ಕಡೆ ಇರುವ ಖಾಲಿ ಜಾಗದಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಖಾಸಗಿ ವಾಹನಗಳಿಗೆ ಪಾರ್ಕಿಂಗ್​ ವ್ಯವಸ್ಥೆಗೆ ಮುಂದಾಗಿದ್ದರು.

ಈ ಮೇಲಿನ ಬೆಳವಣಿಗೆಗಳು, ವಿಧಾನಸೌಧದಲ್ಲಿ ಉಗ್ರರ ದಾಳಿಯಾಗುವ ಮುನ್ಸೂಚನೆ ನಮ್ಮ ರಾಜ್ಯದ ಗುಪ್ತಚರರಿಗೂ ಮೊದಲೇ ಲಭಿಸಿತ್ತಾ ಎನ್ನುವ ಅನುಮಾನ ಮೂಡಿಸಿವೆ.

Comments are closed.