ಕರ್ನಾಟಕ

ಬಿಬಿಎಂಪಿ ಪುನಾರಚನೆಯನ್ನು ವಿರೋಧಿಸುವವರು ಪರ್ಯಾಯ ಮುಂದಿಡಲಿ

Pinterest LinkedIn Tumblr

ಬೆಂಗಳೂರು: “ಬಿಬಿಎಂಪಿ ಪುನಾರಚನೆಗೆ ಅಪಸ್ವರ ಎತ್ತುವವರು, ಉತ್ತಮ ಆಡಳಿತಕ್ಕೆ ಪರ್ಯಾಯಗಳನ್ನು ಮುಂದಿಡಲಿ’ ಎಂದು ನಗರ ತಜ್ಞ ಹಾಗೂ ಪುನರ್‌ ರಚನೆ ಸಮಿತಿ ಸದಸ್ಯ ರವಿಚಂದರ್‌ ತಿಳಿಸಿದರು. ನಗರದ ಜ್ಯೋತಿಬಸು ಭವನದಲ್ಲಿ ಮಂಗಳವಾರ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ “ಬಿಬಿಎಂಪಿ ಪುನಾರಚನೆ, ಬಿ.ಎಸ್‌. ಪಾಟೀಲ ವರದಿ- ಒಂದು ಚರ್ಚೆ’ಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪಾಲಿಕೆಯ ಈಗಿನ ಆಡಳಿತ ವ್ಯವಸ್ಥೆಗೆ ಜನ ಆಶಯದಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವೇಗವಾಗಿ ಬೆಳೆಯುತ್ತಿರುವ ಮಹಾನಗರಕ್ಕೆ ಪ್ರತ್ಯೇಕ ಕಾಯಿದೆ ರೂಪಿಸಿ, ಆಡಳಿತವನ್ನು ಸುಸ್ಥಿತಿಗೆ ತರಬೇಕಿದೆ. ಈ ಹಿನ್ನೆಲೆಯಲ್ಲಿ ಪುನಾರಚನೆ ಮಾಡಲಾಗಿದೆ ಹೊರತು, ನಗರ ವಿಭಜನೆ ಇದರ ಉದ್ದೇಶವಲ್ಲ ಎಂದು ತೀಕ್ಷಣವಾಗಿ ಹೇಳಿದರು.

ಬಿಬಿಎಂಪಿ ಪುನಾರಚನೆ ಬೇಡ ಎನ್ನುವವರು ಆಡಳಿತ ಸುಧಾರಣೆಗೆ ಪರ್ಯಾಯಗಳನ್ನು ಜನರ ಮುಂದಿಡಲಿ. ಅಥವಾ ಸಮಿತಿಯ ಅಂಶಗಳಿಗೆ ಮತ್ತಷ್ಟು ಸುಧಾರಿತ ಸಲಹೆ ನೀಡಬೇಕು. ಜನರೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು. ಅಂತಿಮವಾಗಿ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿ ಎಂದು ರವಿಚಂದರ್‌ ತಿಳಿಸಿದರು.

ಉದ್ದೇಶಿತ ಪುನಾರಚನೆಯಂತೆ ಈಗಿನ 198 ವಾರ್ಡ್‌ಗಳನ್ನು ಉಳಿಸಿಕೊಂಡು ಐದು ವಲಯಗಳಾಗಿ ವಿಂಗಡಿಸಲಾಗಿದೆ. ಇವುಗಳು ಮಹಾನಗರ ಪಾಲಿಕೆ ರೀತಿ ಕಾರ್ಯನಿರ್ವಹಿಸಿದರೂ, ಬೃಹತ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಾರ್ಯನಿರ್ವಹಿಸಲಿದೆ. ಪ್ರಾಧಿಕಾರದ ಮುಖ್ಯಸ್ಥರು ಜನರಿಂದ ನೇರ ಆಯ್ಕೆ ಮಾಡುವ ಪದ್ಧತಿಗೆ ಶಿಫಾರಸು ಮಾಡಲಾಗಿದೆ. ಭವಿಷ್ಯದ ಬೆಂಗಳೂರು ಹಿತದೃಷ್ಟಿಯಿಂದ ಹೊಸ ಕಾಯಿದೆ ಮೂಲಕ ಉತ್ತಮ ಆಡಳಿತ ವ್ಯವಸ್ಥೆ ತರುವುದು ಇದರ ಆಶಯ ಎಂದರು.

ಸಿವಿಕ್‌ ಸಂಸ್ಥೆ ಮುಖ್ಯಸ್ಥೆ ಕಾತ್ಯಾಯಿನಿ ಚಾಮರಾಜ್‌ ಮಾತನಾಡಿ, “ಜನಸ್ನೇಹಿ ಆಡಳಿತಕ್ಕಾಗಿ ಎಲ್ಲರೂ ಒಪ್ಪುತ್ತಾರೆ. ಆದರೆ, ಪುನಾರಚನೆ ವರದಿಯಲ್ಲಿ ಶಿಫಾರಸು ಮಾಡಿದಂತೆ ಐದು ಮೇಯರ್‌ಗಳು ಒಟ್ಟಾಗಿ ಕೆಲಸ ಮಾಡುವುದು ಕಷ್ಟ. ರಾಜಕೀಯ ಪಕ್ಷಗಳ ಪ್ರಭಾವದಿಂದಾಗಿ ಬೃಹತ್‌ ಬೆಂಗಳೂರು ಪ್ರಾಧಿಕಾರಕ್ಕೆ ಚುನಾಯಿತರಾಗುವ ಮೇಯರ್‌ ಕೂಡ ಸರ್ವಾಧಿಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ’ ಎಂದು ಪ್ರಶ್ನಿಸಿದರು.

ಪುನಾರಚನೆ ವರದಿಯಲ್ಲಿ ಆಡಳಿತ ಹಾಗೂ ಮೂಲಸೌಕರ್ಯದ ವಿಚಾರಗಳಿಗೆ ಹೆಚ್ಚಿನ ಆದ್ಯತೆ ದೊರೆತಿದೆ. ಕೊಳಚೆಪ್ರದೇಶಗಳ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಸುಸ್ಥಿರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡದಿದ್ದಲ್ಲಿ ನಗರದ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಆಶಯದಂತೆ ಕೆಲಸ ಮಾಡುವುದು ದುಸ್ತರವಾಗಲಿದೆ. ಇನ್ನಷ್ಟು ಚರ್ಚೆಗಳು ನಡೆದು ಸ್ಪಷ್ಟತೆ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.

Comments are closed.