ಕರ್ನಾಟಕ

ರಾಜ್ಯದಲ್ಲಿ ಲೋಕಸಭೆಗೆ ಕಾಂಗ್ರೆಸ್ ತಯಾರಿ, ಮೈತ್ರಿಗೆ ವಿರೋಧ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಪಕ್ಷವನ್ನು ತಳಮಟ್ಟದಿಂದಲೇ ಶಕ್ತಿಯುತಗೊಳಿಸುವ ಕಾರ್ಯಕ್ಕೆ ತತಕ್ಷಣದಿಂದ ಚಾಲನೆ ನೀಡಲು ಕಾಂಗ್ರೆಸ್‌ ಮುಂದಾಗಿದ್ದು, ವಿಧಾನಸಭೆ ಚುನಾವಣೆ ವೇಳೆ ಟಿಕೆಟ್‌ ಸಿಗದೆ ಪಕ್ಷ ಬಿಟ್ಟ ಪ್ರಭಾವಿ ನಾಯಕರನ್ನು ವಾಪಸ್‌ ಕರೆತರುವ ಬಗ್ಗೆಯೂ ತೀರ್ಮಾನಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಶಾಸಕರು, ಮಾಜಿ ಶಾಸಕರು, ಜಿಲ್ಲಾ, ತಾಲೂಕು, ಬ್ಲಾಕ್‌ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಪಕ್ಷ ಸಂಘಟಿಸಲು ಬ್ಲಾಕ್‌ ಹಾಗೂ ವಿಧಾನಸಭೆ ಕ್ಷೇತ್ರಾವಾರು ಸಮಾವೇಶ ಆಯೋಜಿಸುವುದು, ಕ್ರಿಯಾಶೀಲರಲ್ಲದ ಪದಾಧಿಕಾರಿಗಳ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಶುಕ್ರವಾರ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಶಿವಮೊಗ್ಗ, ಮೈಸೂರು, ಮಂಡ್ಯ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಗಳ ಮುಖಂಡರ ಸಭೆ ನಡೆಸಿ ಸಜ್ಜಾಗುವಂತೆ ಸೂಚಿಸಿದರು.ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದೆ ಬೇರೆ ಪಕ್ಷಗಳಿಗೆ ಹೋಗಿರುವ ನಾಯಕರನ್ನು ವಾಪಸ್‌ ಕರೆತರಲು ಜಿಲ್ಲಾ ಮುಖಂಡರು ಪ್ರಯತ್ನಿಸಿ. ಪಕ್ಷಕ್ಕೆ ಲಾಭ ತರುವ ನಾಯಕರನ್ನು ಕರೆತನ್ನಿ ಎಂದು ನಿರ್ದೇಶನ ನೀಡಿದರು.

ಮೈತ್ರಿಗೆ ವಿರೋಧ
ಲೋಕಸಭೆ ಚುನಾವಣೆಯಲ್ಲಿಯೂ ಜೆಡಿಎಸ್‌ ಜತೆ ಮೈತ್ರಿ ಬೇಡ ಎಂದು ಹಳೆ ಮೈಸೂರು ಭಾಗದ ಕಾಂಗ್ರೆಸ್‌ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಹಾಸನ ಮತ್ತು ಮಂಡ್ಯ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‌ ಗೆದ್ದಿದ್ದು ಮೈತ್ರಿಯಾದರೆ ಈ ಎರಡೂ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತದೆ. ಅಂತಹ ಕ್ರಮ ಕೈಗೊಂಡರೆ ಎರಡೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹಾನಿಯಾಗಲಿದೆ ಎಂ ಆತಂಕ ವ್ಯಕ್ತಪಡಿಸಿದರು.

ಮಂಜು ನಿರ್ಗಮನ
ಹಾಸನ ಲೋಕಸಭೆ ಕ್ಷೇತ್ರ ಕುರಿತ ಸಭೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್‌ ಜತೆ ಮೈತ್ರಿ ಬೇಡ. ಸ್ವತಂತ್ರವಾಗಿ ಸ್ಪರ್ಧೆ ಮಾಡೋಣ. ಈಗಾಗಲೇ ಜಿಲ್ಲೆಯಲ್ಲಿ ಜೆಡಿಎಸ್‌ ಮೇಲುಗೈ ಸಾಧಿಸಿದೆ. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಹೇಳಿದರು.

ಲೋಕಸಭೆ ಮೈತ್ರಿ ಬಗ್ಗೆ ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ನಿಮ್ಮ ಅಭಿಪ್ರಾಯ ನೀವು ವ್ಯಕ್ತಪಡಿಸಿ ಎಂದು ನಾಯಕರು ಸೂಚನೆ ನೀಡಿದರು. ಇದಾದ ನಂತರ ಮಾಜಿ ಸಚಿವ ಎಂ.ಮಂಜು ಅವರು ಸಭೆಯಿಂದಲೇ ನಿರ್ಗಮಿಸಿದರು. ಈ ನಡುವೆಯೂ ಸಭೆ ಮುಂದುವರಿಸಿದ ವೇಣುಗೋಪಾಲ್‌, ಹಾಸನ ಕ್ಷೇತ್ರದ ಬಗ್ಗೆ ನಿರ್ಧಾರ ಕೈಗೊಳ್ಳುವುದು ರಾಹುಲ್‌ ಗಾಂಧಿ ವಿವೇಚನೆಗೆ ಬಿಡಲು ನಿರ್ಧರಿಸಿದರು. ಇನ್ನು, ಮಂಡ್ಯ ಲೋಕಸಭೆ ಕ್ಷೇತ್ರದ ಸಮಾಲೋಚನೆ ಸಂದರ್ಭದಲ್ಲೂ ಸ್ಥಳೀಯ ನಾಯಕರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಚರ್ಚೆ
ದಕ್ಷಿಣ ಕನ್ನಡ ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರಗಳ ಕುರಿತು ಸಭೆಯಲ್ಲಿ ದಕ್ಷಿಣ ಕನ್ನಡದಿಂದ ರಮಾನಾಥ್‌ರೈ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ವಿನಯ ಕುಮಾರ್‌ ಸೊರಕೆ ಸ್ಪರ್ಧೆಗೆ ಆಸಕ್ತಿ ತೋರಿದರು ಎಂದು ಹೇಳಲಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವೀರಪ್ಪ ಮೊಯಿಲಿ ಹಾಗೂ ಬಿ.ಕೆ.ಹರಿಪ್ರಸಾದ್‌ ಅವರ ಹೆಸರು ಪ್ರಸ್ತಾಪವಾಯಿತು ಎಂದು ತಿಳಿದು ಬಂದಿದೆ. ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹಾಗೂ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಮಂಜುನಾಥ ಭಂಡಾರಿ ಹೆಸರು ಪ್ರಸ್ತಾಪವಾಯಿತು.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಮಾಜಿ ಸಂಸದ ಎಚ್‌.ಟಿ. ಸಾಂಗ್ಲಿಯಾನ, ಮಾಜಿ ಸಚಿವರಾದ ರೋಷ‌ನ್‌ ಬೇಗ್‌, ನಸೀರ್‌ ಅಹಮದ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಹೆಸರು ಚರ್ಚೆಗೆ ಬಂದಿತು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಗುರುತಿಸುವ ಬಗ್ಗೆಯೂ ಚರ್ಚೆಯಾಯಿತು. ಕಳೆದ ಬಾರಿ ಸ್ಪರ್ಧೆ ಮಾಡಿ ಸೋತಿರುವ ನಾರಾಯಣಸ್ವಾಮಿ ಅವರ ಹೆಸರು ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ.

ಮೈಸೂರಿನಿಂದ ಸಿದ್ದು ಸ್ಪರ್ಧೆ?
– ಮೈಸೂರು ಕ್ಷೇತ್ರವನ್ನು ಜೆಡಿಎಸ್‌ ಬಯಸಿದ್ದರೂ ಕಾಂಗ್ರೆಸ್‌ ಉಳಿಸಿಕೊಳ್ಳಬೇಕು ಎಂದು ಜಿಲ್ಲಾ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರಿನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಅಂಬರೀಷ್‌, ಸಿ.ಎಚ್‌. ವಿಜಯಶಂಕರ್‌ ಅವರನ್ನು ಅಭ್ಯರ್ಥಿಯಾಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಸಿದ್ದರಾಮಯ್ಯ ಕಣಕ್ಕಿಳಿದರೆ ಗೆಲುವು ಸುಲ» ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸಭೆಯಲ್ಲಿದ್ದ ಸಿದ್ದರಾಮಯ್ಯ ಅವರಿಗೂ ಸ್ಪರ್ಧೆಗೆ ಒತ್ತಾಯಿಸಲಾಯಿತು. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಸಿದ್ದರಾಮಯ್ಯ ಹೇಳಿದರು ಎಂದು ತಿಳಿದು ಬಂದಿದೆ.

ಗೈರು
– ಪಕ್ಷದ ಚಟುವಟಿಕೆಗಳಿಂದ ದೂರವೇ ಇರುವ ಮಾಜಿ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಎಂ.ಎಚ್‌. ಅಂಬರೀಷ್‌ ಅವರು ಮೈಸೂರು ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳ ಸಭೆಗೂ ಬಾರದ ಗೈರು ಹಾಜರಾಗಿದ್ದರು.
ಬಿಜೆಪಿ ಮಾದರಿ ಚರ್ಚೆ
– ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತಾ ಸಭೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು ಬಿಜೆಪಿಯ ಮಾದರಿ.ಕಾಂಗ್ರೆಸ್‌ಗೆ ಶಕ್ತಿ ತುಂಬಲು ಬಿಜೆಪಿ ಸಂಘಟನೆಯ ಮಾದರಿ ಅನುರಿಸಬೇಕು. ಬಿಜೆಪಿಯ ವಿಸ್ತಾರಕ್‌ ಮಾಡೆಲ್‌ನಲ್ಲೆ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ನಾನಾ ಕ್ಷೇತ್ರಗಳ ಉಸ್ತುವಾರಿಗಳಿಗೆ ವೇಣುಗೋಪಾಲ್‌ ಸೇರಿದಂತೆ ಪಕ್ಷದ ಪ್ರಮುಖರು ಸೂಚಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ವಿಸ್ತಾರಕ್‌ ಮಾದರಿ ಶ್ಲಾ ಸಿದ ವೇಣುಗೋಪಾಲ್‌, ಅದರಿಂದಲೇ ಬಿಜೆಪಿ ಬಲಿಷ್ಟವಾಗಿದೆ. ಬಿಜೆಪಿಯ ಸಂಘಟನೆ ನೋಡಿ ಕಲಿತುಕೊಳ್ಳುವುದು ಸಾಕಷ್ಟಿದೆ. 30 ಮತದಾರರಿಗೆ ಒಬ್ಬರಂತೆ ಕಾರ್ಯಕರ್ತರನ್ನು ನೇಮಿಸಿ ಸಂಘಟನೆ ಕೈಗೊಳ್ಳಬೇಕು ಎಂದು ಸೂಚಿಸಿದರು ಎಂದು ಹೇಳಲಾಗಿದೆ.

ಪಕ್ಷ ಬಿಟ್ಟವರ ವಾಪಸ್‌ ಕರೆತರುವುದು
ವಿಧಾನಸಭೆ ಚುನಾವಣೆ ವೇಳೆ ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರಬೇಕು. ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು ಯಾವುದೇ ಮುಖಂಡರನ್ನು ಕಡೆಗಣಿಸಬಾರದು. ಪಕ್ಷ ಬಿಟ್ಟ ಹೋದವರ ಮನವೊಲಿಸಿ ಮನವೊಲಿಸಿ ವಾಪಸ್‌ ಸೇರಿಸಿಕೊಳ್ಳಬೇಕು. ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಸೇರಿದಂತೆ ಎಲ್ಲ ನಾಯಕರನ್ನು ಈ ನಿಟ್ಟಿನಲ್ಲಿ ಸಂಪರ್ಕಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಳೆ ಮೈಸೂರು ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಅಂತ ಕೆಲವು ನಾಯಕರು ವೈಯಕ್ತಿಕವಾಗಿ ಹೇಳಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಅಂತ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಷಾಢ ಮುಗಿದ ಬಳಿಕ ಸಚಿವ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕವೂ ನಡೆಯಲಿದೆ.
– ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಸಂಭಾವ್ಯ ಅಭ್ಯರ್ಥಿಗಳು
ಶಿವಮೊಗ್ಗ – ಕಿಮ್ಮನೆ ರತ್ನಾಕರ್‌, ಮಂಜುನಾಥ್‌ ಭಂಡಾರಿ
ಮೈಸೂರು – ಸಿದ್ದರಾಮಯ್ಯ, ಅಂಬರೀಷ್‌, ಸಿ.ಎಚ್‌. ವಿಜಯಶಂಕರ್‌
ಬೆಂಗಳೂರು ಸೆಂಟ್ರಲ್‌- ಸಾಂಗ್ಲಿಯಾನ, ರೋಷ‌ನ್‌ ಬೇಗ್‌, ನಸೀರ್‌ ಅಹಮದ್‌, ರಿಜ್ವಾನ್‌ ಅರ್ಷದ್‌
ಉಡುಪಿ-ಚಿಕ್ಕಮಗಳೂರು- ವಿನಯಕುಮಾರ್‌ ಸೊರಕೆ, ವೀರಪ್ಪಮೊಯಿಲಿ, ಬಿ.ಕೆ.ಹರಿಪ್ರಸಾದ್‌
ದಕ್ಷಿಣ ಕನ್ನಡ- ರಮಾನಾಥ್‌ ರೈ

Comments are closed.