ಬೆಂಗಳೂರು: ಅಕ್ರಮವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹಣಕಾಸು ವಹಿವಾಟು ನಡೆಸುವಾಗ ನೀಡಿದ ಚೆಕ್‌ಗಳು ಬೌನ್ಸ್ ಆದರೆ ಅದು ಕ್ರಿಮಿನಲ್ ಪ್ರಕರಣವಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಎಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದಲ್ಲಿ ಚೀಫ್ ಸೂಪರ್‌ವೈಸರ್ ಆಗಿರುವ ಆರ್.ಪರಿಮಳಾ ಬಾಯಿ ವಿರುದ್ಧದ ಬೆಂಗಳೂರಿನ 16ನೇ ಎಸಿಎಂಎಂ ನ್ಯಾಯಾಲಯದಲ್ಲಿ ದ್ದ ಚೆಕ್ ಬೌನ್ಸ್ ಪ್ರಕರಣವನ್ನು ರದ್ದು ಮಾಡಿದ ಕೋರ್ಟ್ ಈ ತೀರ್ಪು ನೀಡಿದೆ.
ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಕೆಲಸ ಕೊಡಿಸುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಚೆಕ್ ಅಮಾನ್ಯಗೊಂಡಿದ್ದ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು.ವಾದ-ಪ್ರತಿವಾದ ಆಲಿಸಿದ ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯಪೀಠ, ಕೆಲಸ ಕೊಡಿಸುವುದಾಗಿ ದೂರುದಾರರು ಮಾಡಿಕೊಂಡಿರುವ ಒಪ್ಪಂದವೇ ಅಕ್ರಮ. ಹಣ ನೀಡಿರುವುದಕ್ಕೆ ಮತ್ತು ಪಡೆದಿರುವುದಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ನಡೆಸಿರುವ ಹಣಕಾಸು ವಿನಿಮಯ ಅಕ್ರಮ ಉದ್ದೇಶದ್ದು. ಹಾಗಾಗಿ ಈ ಪ್ರಕರಣ ಊರ್ಜಿತವಾಗುವುದಿಲ್ಲ ಎಂದು ಮಹತ್ವದ ಆದೇಶ ನೀಡಿದೆ.
ಅಪರಾಧ ದಂಡ ಸಂಹಿತೆಯಲ್ಲಿ ಒಪ್ಪಿತ ತತ್ವ ಎಂದರೆ, ಮೇಲ್ನೋಟಕೆ ಎಫ್‌ಐಆರ್‌ನಲ್ಲಿ ದಾಖಲಾಗಿರುವ ಅಂಶಗಳಲ್ಲಿ ಯಾವುದೇ ಬಗೆಯ ಆರೋಪಗಳನ್ನು ಪುಷ್ಟಿಕರಿಸುವ ಅಂಶಗಳಿಲ್ಲವೆಂದಾದರೆ ಅಥವಾ ಪುರಾವೆಗಳಿಲ್ಲವೆಂದರೆ, ಅಪರಾಧ ದಂಡ ಸಂಹಿತೆ ಸೆಕ್ಷನ್ 482 ಅನ್ವಯ ಹೈಕೋರ್ಟ್ ಅಂತಹ ಪ್ರಕರಣಗಳನ್ನು ರದ್ದುಗೊಳಿಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಶಿವಾನಂದ ನಗರದ ಭಾಸ್ಕರ್ ನರಸಿಂಹಯ್ಯ ಮತ್ತು ಆರ್.ಪರಿಮಳಾ ಬಾಯಿ ಪರಸ್ಪರ ಪರಿಚಿತರು. ಬಾಸ್ಕರ್ ತಮ್ಮ ಮಗ ಬಿ.ಶರತ್‌ಗೆ ಎಚ್‌ಎಎಲ್‌ನಲ್ಲಿ ಉದ್ಯೋಗ ಕೊಡಿಸುವಂತೆ ಪರಿಮಳಾ ಅವರಲ್ಲಿ ಕೇಳಿದ್ದರು.ಅವರು, ಉದ್ಯೋಗ ಕೊಡಿಸುತ್ತೇನೆ,ಅದಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಹೇಳಿದ್ದರು. ಅದರಂತೆ ಭಾಸ್ಕರ್ ಹಣ ನೀಡಲು ಒಪ್ಪಿ ಕಂತಿನಲ್ಲಿ 10 ಲಕ್ಷ ರೂ. ನೀಡಿದ್ದರು. ಆದರೆ, ಉದ್ಯೋಗ ಸಿಕ್ಕಿರಲಿಲ್ಲ. ಹೀಗಾಗಿ ಅವರು ಹಣ ವಾಪಸ್ ಕೇಳಿದ್ದರು.
ಆಗ ಪರಿಮಳಾ ಅವರು 10 ಲಕ್ಷ ರೂ.ಚೆಕ್ ನೀಡಿದ್ದರು.ಆ ಚೆಕ್ ಬೌನ್ಸ್ ಆಗಿತ್ತು. ಈ ವೇಳೆ ಭಾಸ್ಕರ್ ನರಸಿಂಹಯ್ಯ ದೂರು ದಾಖಲಿಸಿದ್ದರು. ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು, ಪರಿಮಳಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅವರು ತಮ್ಮ ವಿರುದ್ಧ ಹೂಡಿರುವುದು ಸುಳ್ಳು ಪ್ರಕರಣ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಕೋರ್ಟ್, ಹಣವನ್ನು ಸಾಲವಾಗಿ ಪಡೆದಿಲ್ಲ, ಹಣ ನೀಡುವ ವ್ಯಕ್ತಿಗೆ ಕೆಲಸ ಕೊಡಿಸುವ ಅಧಿಕಾರ ಇರುವ ಬಗ್ಗೆ ಗಮನ ಹರಿಸಿಲ್ಲ. ಎಚ್‌ಎಎಲ್‌ನಂತಹ ಸರಕಾರಿ ಒಡೆತನದ ಸಂಸ್ಥೆಯಲ್ಲಿ ಅಕ್ರಮ ಹೇಗೆ ನಡೆಯುತ್ತದೆ ಎಂಬುದನ್ನು ಅರಿತಿಲ್ಲ. ಅಲ್ಲದೆ, ವಾಮ ಮಾರ್ಗದ ಮೂಲಕ ಮಗನಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದಾರೆ ಎನ್ನುವ ಅಂಶವನ್ನು ಪರಿಗಣಿಸಿ ಪ್ರಕರಣವನ್ನು ರದ್ದು ಮಾಡಿದೆ.
Comments are closed.