ಬೆಂಗಳೂರು(ಆಗಸ್ಟ್.12): ಕಾಂಗ್ರೆಸ್ಗೆ ವಲಸೆ ಹಕ್ಕಿಯಾಗಿ ಬಂದ ಅಹಿಂದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು 71ನೇ ಜನ್ಮದಿನದ ಸಂಭ್ರಮ. ದೇವರಾಜ ಅರಸು ನಂತರ ಅಹಿಂದ ಸಮುದಾಯಗಳಿಗೆ ದುಡಿದ ನಾಯಕನ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಅಭಿಮಾನಗಳಿಂದ ಆಚರಿಸಲಾಗುತ್ತಿದೆ.
ಜೆಡಿಎಸ್ನಿಂದ ಸಿಡಿದು ಹೊರಬಂದ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಕೇವಲ ಎರಡೇ ವರ್ಷಗಳಲ್ಲಿ ಎದುರಾಳಿಯಿಲ್ಲದ ನಾಯಕರಾಗಿ ಬೆಳೆದರು. ವಲಸಿಗ ಎಂಬ ಹಣೆಪಟ್ಟಿಯಿದ್ದರೂ ಯಾವುದನ್ನು ಲೆಕ್ಕಿಸದೇ ಸಿದ್ದರಾಮಯ್ಯ ಕಾಂಗ್ರೆಸ್ ಹಿರಿತಲೆಗಳನ್ನ ಮೀರಿಸಿ ಉತ್ತುಂಗಕ್ಕೇರಿದರು.
ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ನಾಯಕರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರಮುಖರು. ಜೆಡಿಎಸ್ ಜತೆಗಿನ ಭಿನ್ನಾಭಿಪ್ರಾಯದಿಂದ ಜಾತ್ಯತೀತ ಪಕ್ಷ ತೊರೆದ ಸಿದ್ದರಾಮಯ್ಯ ಅಹಿಂದ ಹೋರಾಟ ಸಂಘಟಿಸಿ, ಕಾಂಗ್ರೆಸ್ ತೆಕ್ಕೆಗೆ ಸೇರಿದ್ದು ಇತಿಹಾಸ.
ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ಸೋಲಿಲ್ಲದ ಸರದಾರರ ಎದುರು 1983ರ ಸಂದರ್ಭದಲ್ಲಿ ಮೈಸೂರಿನಲ್ಲಿ ಲೋಕದಳ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಅಂತಹ ಘಟಾನುಘಟಿಗಳ ನಡುವೆ ಗೆದ್ದು ನಗೆ ಬೀರಿದ ಸಿದ್ದರಾಮಯ್ಯ ಎಲ್ಲರನ್ನು ಹುಬ್ಬೇರಿಸಿದರು.
ಬಳಿಕ ಜನತಾ ಪರಿವಾರಕ್ಕೆ ಸೇರಿದ ಅಹಿಂದ ನಾಯಕ ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ರಾಜಕೀಯ ಗರಡಿಯಲ್ಲಿ ಪಾಳಗಿ ಸೋಲಿಲ್ಲದ ಸರದಾರನಾಗಿ ಬೆಳೆದರು. ತಾವು ಬೆಳೆದ ಆರಂಭಿಕ ಹಂತದಲ್ಲೇ ಮೈಸೂರಿನ ಮೇಲೆ ನಿಯಂತ್ರಣ ಸಾಧಿಸಿದ್ದರು. ಆದರೆ, ಜೆಡಿಎಸ್ ಜತೆಗೆ ಸಿದ್ದರಾಮಯ್ಯ ಭಿನ್ನಾಭಿಪ್ರಾಯ ಹೊಂದಿದ್ದರು.
ಭಿನ್ನಾಭಿಪ್ರಾಯದಿಂದ ಸಿಡಿದೆದ್ದು ಜನತಾದಳದಿಂದ ಹೊರಬಂದ ಸಿದ್ದರಾಮಯ್ಯ ಕೂಡಲೇ ಅಹಿಂದ ನೆರಳಲ್ಲಿಯೇ ಕಾಂಗ್ರೆಸ್ ಪಾಳಯಕ್ಕೆ ಸೇರಿದರು. ರಾಜ್ಯದಲ್ಲಿ ನಾಯಕತ್ವದ ಕೊರತೆಯಿಂದ ನೆಲೆ ಕಳೆದುಕೊಳ್ಳುತ್ತಿದ್ದ ಕಾಂಗ್ರೆಸ್ಗೆ ಸಿದ್ದರಾಮಯ್ಯ ಬಲ ತುಂಬಿದರು. ಈ ಮೂಲಕ ಕಾಂಗ್ರೆಸ್ ಬೇರನ್ನು ಗಟ್ಟಿಗೊಳಿಸಿದರು.
ಗಣಿದಣಿಗಳ ವಿರುದ್ಧ ಹೋರಾಟ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಗಣಿ ದಣಿಗಳ ಸವಾಲು ಸ್ವೀಕರಿಸಿ ಬಳ್ಳಾರಿವರೆಗೂ ಪಾದ ಯಾತ್ರೆ ನಡೆಸಿದರು. ಬಳಿಕ ಕಾಂಗ್ರೆಸ್ ಸಾರ್ವಜನಿಕ ಸಮಾವೇಶದಲ್ಲಿ ಸಿದ್ದರಾಮಯ್ಯ ತೊಡೆ ತಟ್ಟಿ ನಿಂತಾಗ ರಾಜ್ಯ ಕಾಂಗ್ರೆಸ್ಗೆ ಮರುಜನ್ಮ ಸಿಕ್ಕಂತಾಯಿತು.
ಐದು ವರ್ಷ ಪೂರೈಸಿದ ಸಿದ್ದು: ನಂತರ 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯಿತು. ಅಧಿಕಾರದಿಂದ ಕೆಳಗಿಳಿಸಲು ಎಷ್ಟೇ ಕುತಂತ್ರಗಳನ್ನು ನಡೆಸಿದರು, ಎಲ್ಲವನ್ನೂ ಮೆಟ್ಟಿನಿಂತ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅಧಿಕಾರ ಪೂರೈಸಿದರು.
ಮೇ.13, 2013ರಂದು ಸರಳ ಬಹುಮತ ಪಡೆದ ಕಾಂಗ್ರೆಸ್ನಿಂದ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ್ದರು. ನಂತರ ನಡೆದಿದ್ದೆಲ್ಲ ಇತಿಹಾಸ. ಯಶಸ್ವಿಯಾಗಿ 5 ವರ್ಷ ಪೂರೈಸುವ ಮೂಲಕ ಪೂರ್ಣಾವಧಿ ಅಧಿಕಾರ ನಡೆಸಿದ ಕರ್ನಾಟಕದ ನಾಲ್ಕನೇ ಸಿಎಂ ಎಂಬ ಖ್ಯಾತಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ಭಾಗ್ಯಗಳ ಸರದಾರ: ಅಹಿಂದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಶಾದಿಭಾಗ್ಯ ಸೇರಿದಂತೆ ಭಾಗ್ಯಗಳ ಬಾಗಿಲು ತೆರೆದು ಸಮಾಜದ ಕೆಳ ವರ್ಗದ ಜನರ ಏಳಿಗೆಗೆ ಪ್ರಯತ್ನಿಸಿದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮೋದಿ ಮಾತಿನ ಏಟಿಗೆ ಕಂಗೆಟ್ಟಾಗ ಪಕ್ಷದ ಪರವಾಗಿ ನಿಂತು ಮೋದಿಗೆ ಸಡ್ಡು ಹೊಡೆದರು.
ಕೈ ಹೈಕಮಾಂಡ್ ಮೀರಿ ಬೆಳೆದ ಸಿದ್ದು: ಜೆಡಿಎಸ್ನಿಂದ ವಲಸೆ ಬಂದು ಎರಡು ವರ್ಷಗಳಲ್ಲೇ ಕಾಂಗ್ರೆಸ್ ಹೈಕಮಾಂಡ್ ಮೆಚ್ಚುಗೆ ಪಡೆದವರು ಸಿದ್ದರಾಮಯ್ಯ. ಕಾಂಗ್ರೆಸ್ಎಳೆದ ಲಕ್ಷ್ಮಣ ರೇಖೆಯನ್ನ ದಾಟಿ ಬೆಳೆದ ಸಿದ್ದರಾಮಯ್ಯಗೆ ದಿಲ್ಲಿ ವರಿಷ್ಠರೇ ತಲೆಬಾಗಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ಕಾಂಗ್ರೆಸ್ನಲ್ಲಿ ಚುನಾವಣೆಗೆ ಮುನ್ನವೇ ಸಿಎಂ ಅಭ್ಯರ್ಥಿ ಘೋಷಣೆಯ ಸಂಸ್ಕೃತಿ ಇಲ್ಲದಿದ್ದರೂ ಎರಡನೇ ಬಾರಿಗೆ ಸಿದ್ದರಾಮಯ್ಯ ನಮ್ಮ ಸಿಎಂ ಎಂದು ರಾಹುಲ್ ಗಾಂಧಿ ಪದೇ ಪದೇ ಹೇಳಿರುವುದೇ ಇದಕ್ಕೆ ಸಾಕ್ಷಿಯಾಗಿತ್ತು.
ರಾಷ್ಟ್ರದಲ್ಲಿ ಸಿದ್ದು ಹವಾ: 21 ರಾಜ್ಯಗಳಲ್ಲಿ ಕಾಂಗ್ರೆಸ್ ಸಾಲು ಸಾಲಾಗಿ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ಪಾಲಿಗೆ ಆಕ್ಸಿಜನ್ ಆಗಿದ್ದ ಸಿದ್ದರಾಮಯ್ಯ, ಉತ್ತರದಲ್ಲಿ ಅಬ್ಬರಿಸಿದ ಮೋದಿ, ಅಮಿತ್ ಷಾಗೆ ದಕ್ಷಿಣದಲ್ಲಿ ಬಿಸಿಮುಟ್ಟಿಸಿದರು. ಪ್ರತೀ ಹಂತದಲ್ಲಿಯೂ ಬಿಜೆಪಿಯ ಉಗ್ರ ಹಿಂದುತ್ವಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಅಸ್ತ್ರ, ಕನ್ನಡದ ಪ್ರತ್ಯೇಕ ಧ್ವಜ, ಹಿಂದಿ ಹೇರಿಕೆ ವಿರುದ್ಧ ಹೋರಾಟ, ಕನ್ನಡದ ಅಸ್ಮಿತೆಯ ಸೂಕ್ಷ್ಮ ವಿಚಾರದ ಮೂಲಕ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದರು.
ನಾನು ಅಹಿಂದಕ್ಕೆ ಮಾತ್ರ ಸೀಮಿತವಲ್ಲ: ನಾನು ಅಹಿಂದ ವರ್ಗಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅರಮನೆ ಮೈದಾನದಲ್ಲಿ ನಡೆದ ಕುರುಬರ ಸಂಘದ ಸಮಾವೇಶವೊಂದರಲ್ಲಿ ಮಾತನಾಡಿದ್ದ ಸಿಎಂ ‘ನನ್ನನ್ನು ಅಹಿಂದ ವರ್ಗಕ್ಕೆ ಮಾತ್ರ ಸೀಮಿತಗೊಳಿಸಬೇಡಿ, ಎಲ್ಲಾ ವರ್ಗದ ಪರವಾಗಿ ನಾನು ಕೆಲಸ ಮಾಡಿದ್ದೇನೆ ಎನ್ನುವ ಮೂಲಕ ಜನತೆಯ ಮೆಚ್ಚುಗೆಗೆ ಪಾತ್ರರಾದರು.
Comments are closed.