ಕರ್ನಾಟಕ

ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯ ಪ್ರಮುಖ ಔಷಧಿಗಳು ನಾಪತ್ತೆ

Pinterest LinkedIn Tumblr


ಬೆಂಗಳೂರು: ಕೇಂದ್ರ ಸರಕಾರದ ಶ್ರೇಷ್ಠ ಯೋಜನೆಗಳಲ್ಲೊಂದಾದ ಜನೌಷಧಿ ಯೋಜನೆ ರಾಜ್ಯದಲ್ಲಿ ಹಳ್ಳ ಹಿಡಿದಿರುವ ಲಕ್ಷಣ ಕಾಣುತ್ತಿದೆ. ಬಿಪಿ, ಡಯಾಬಿಟಿಸ್‌ ಮುಂತಾದ ರೋಗಗಳ ಔ‍ಷಧಿ, ಮಾತ್ರೆಗಳು ರಾಜ್ಯದ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಜನೌಷಧಿ ಕೇಂದ್ರಗಳಿಂದ ಮಾಯವಾಗುತ್ತಿದೆಯಂತೆ.

ಜನೌಷಧಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ ಹೆಚ್ಚು ಔಷಧಿಗಳು ಮಾರಾಟವಾಗುತ್ತಿವೆ ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ, ಮೆಡಿಸಿನ್‌ಗಳು ಕಡಿಮೆ ಪೂರೈಕೆಯಾಗುತ್ತಿದೆ ಎಂದು ರಾಜ್ಯದ ರೋಗಿಗಳು ದೂರುತ್ತಿದ್ದಾರೆ. ಇದರಿಂದ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಸ್ಥಾಪಿಸಿರುವ ಕೆಲವು ಜನೌಷಧಿ ಕೇಂದ್ರಗಳಿಗೆ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ದೇಶಾದ್ಯಂತ 3771 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ( ಪಿಎಂಬಿಜೆಪಿ ) ಸ್ಥಾಪಿಸಲಾಗಿದೆ. ಆದರೆ, ಅಧಿಕ ರಕ್ತದೊತ್ತಡ ಹಾಗೂ ಡಯಾಬಿಟಿಸ್‌ನಂತಹ ರೋಗಗಳಿಗೆ ರಾಜ್ಯದ 336 ಕೇಂದ್ರಗಳ ಪೈಕಿ ನಗರದ 35 ಔಷಧಿ ಕೇಂದ್ರಗಳಲ್ಲಿ ನೋ ಸ್ಟಾಕ್‌ ಬೋರ್ಡ್ ಹೆಚ್ಚಾಗಿದೆ. ಇದರಿಂದಾಗಿ ಇತರೆ ಸಾಮಾನ್ಯ ಔಷಧಿ ಕೇಂದ್ರಗಳಲ್ಲಿ ರೋಗಿಗಳು ಹೆಚ್ಚು ಬೆಲೆ ನೀಡಿ ಔಷಧಿಗಳನ್ನು ಕೊಂಡುಕೊಳ್ಳುವಂತಾಗಿದೆ.

ಮೆಡಿಸಿನ್‌ಗಳು ಸ್ಟಾಕ್‌ ಇಲ್ಲ ಎಂದು ರೋಗಿಗಳು ಒಂದು ಕಡೆ ಹೇಳುತ್ತಿದ್ದರೆ, ಇನ್ನೊಂದು ಕಡೆ ರಾಜ್ಯದ ಒಂದು ಜನೌ‍ಧಿ ಕೇಂದ್ರದಲ್ಲಿ ಇಡೀ ದೇಶದಲ್ಲೇ ಹೆಚ್ಚು ಔಷಧಿಗಳು ಮಾರಾಟವಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ. ಹೀಗಾಗಿ, ಎರಡರಲ್ಲಿ ಯಾವುದು ನಿಜ ಎನ್ನುವ ವಿಚಿತ್ರ ಸಂಕಟ ಎದುರಾಗಿದೆ. ಈ ಬಗ್ಗೆ ವಿಜಯ ಕರ್ನಾಟಕ ಸೋದರ ಪತ್ರಿಕೆ ಬೆಂಗಳೂರು ಮಿರರ್‌ ನಗರದ 8 ಪ್ರಮುಖ ಜನೌಷಧಿ ಕೇಂದ್ರಗಳಲ್ಲಿ ವರದಿ ಮಾಡಿದೆ. ಸಾಗಣೆ, ಸಂಪರ್ಕ, ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಪೂರೈಕೆ ಮಾಡುವುದು ಹಾಗೂ ಕೆಲ ರೋಗಿಗಳು ಒಂದೇ ಬಾರಿಗೆ ಹೆಚ್ಚು ಔಷಧಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ಕಾರಣಗಳಿಂದ ಸ್ಟಾಕ್ ಖಾಲಿಯಾಗುತ್ತಿದೆ ಎಂದು ಔಷಧ ಕೇಂದ್ರಗಳ ಅಧಿಕಾರಿಗಳು ಆರೋಪಿಸಿದ್ದಾರೆ. ಇನ್ನೊಂದೆಡೆ, ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ತಪ್ಪು ವರದಿ ನೀಡುತ್ತಿರಬಹುದು ಎಂದು ಪ್ರದೀಪ್ ಎಂಬ ನಾಗರಿಕ ಹೇಳಿದ್ದಾರೆ.

ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಅಧಿಕಾರಿಗಳು, ನಾವು ಕಳೆದ 3 ತಿಂಗಳಿನಿಂದ ಆರೋಗ್ಯ ಹಾಗೂ ಕುಟುಂಬ ಇಲಾಖೆಗೆ ದೂರು ನೀಡಿದ್ದೆವೆ ಎಂದಿದ್ದಾರೆ. ಇನ್ನೊಂದೆಡೆ, ಜುಲೈ ತಿಂಗಳೊಂದರಲ್ಲೇ ಕರ್ನಾಟಕದಲ್ಲಿ 5.5 ಕೋಟಿ ರೂ. ಯಷ್ಟು ಮಾರಾಟವಾಗಿದೆ. ಪೂರೈಕೆ ಕಡಿಮೆಯಾಗುತ್ತಿರುವ ಬಗ್ಗೆ ದೂರು ಇದ್ದರೂ ಸಹ, ಬೇಡಿಕೆ ಹೆಚ್ಚಾದಂತೆ ಸ್ಟಾಕ್‌ ಕಡಿಮೆಯಾಗುವುದು ಸಹಜ ಎಂದು ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ಜನೌಷಧಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ 2 ತಿಂಗಳಿನಿಂದ ಸಾರಿಗೆ ಮುಷ್ಕರದಿಂದಾಗಿ ಔಷಧಗಳ ಸಾಗಾಟದಲ್ಲಿ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ಬೆಂಗಳೂರಿನ ಕೇಂದ್ರವೊಂದರಲ್ಲಿ ತಿಂಗಳಿಗೆ 1 ಲಕ್ಷ 75 ಸಾವಿರ ರೂ. ಆದಾಯ ಬರುತ್ತಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ಹೀಗಾಗಿ ಕರ್ನಾಟಕದಲ್ಲಿ ಡಿಮ್ಯಾಂಡ್ ಬಹಳ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆ ರೋಗಿಗಳ ಬೇಡಿಕೆಯನ್ನು ಈಡೇರಿಸಲು ಬೆಂಗಳೂರಿನಲ್ಲಿ ಪ್ರಾದೇಶಿಕ ಗೋದಾಮನ್ನು ಆರಂಭಿಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳ ಸಿಇಒ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೆಲವು ಔಷಧಿಗಳನ್ನು ನೇರವಾಗಿ ಕೇಂದ್ರ ಗೋದಾಮಿನಿಂದ ಜನೌಷಧಿ ಕೇಂದ್ರಗಳನ್ನು ನೇರವಾಗಿ ಸಾಗಾಟ ಮಾಡುವ ಹೊಸ ಯೋಜನೆಯನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಇದರಿಂದ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್‌ ಮಾಂಡವಿಯಾ ಹೇಳಿದ್ದಾರೆ.

Comments are closed.