ಕರ್ನಾಟಕ

ಗೌರಿ-ಗಣೇಶ ಹಬ್ಬದಲ್ಲಿ ಗಲಭೆಗಳು ನಡೆದರೆ ಎಸಿಪಿ-ಡಿಸಿಪಿಗಳೇ ಹೊಣೆ

Pinterest LinkedIn Tumblr


ಬೆಂಗಳೂರು: ಗಣೇಶ ಹಬ್ಬದ ನೆಪದಲ್ಲಿ ದುಷ್ಕರ್ಮಿಗಳು ಸಮಾಜದ ಶಾಂತಿ ಕದಡಿ, ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಆಯಾ ವ್ಯಾಪ್ತಿಯ ಎಸಿಪಿ ಮತ್ತು ಡಿಸಿಪಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಖಡಕ್‌ ಎಚ್ಚರಿಕೆ ನೀಡಿದರು.

ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಎಸಿಪಿ ಮತ್ತು ಮೇಲ್ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.

”ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ ಏನೆಲ್ಲಾ ಸಮಸ್ಯೆಗಳು ಬರಬಹುದು ಎನ್ನುವುದರ ಬಗ್ಗೆ , ಕಮಿಷನರೇಟ್‌ನ ಸಿದ್ಧತೆ ಹೇಗಿದೆ, ಕಾನೂನು ಸುವ್ಯವಸ್ಥೆ ಹದಗೆಡದಂತೆ ಮಾಡಿಕೊಂಡಿರುವ ತಯಾರಿ ಬಗ್ಗೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದೇನೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನವನ್ನು ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ,” ಎಂದು ಸಚಿವರು ವಿವರಿಸಿದರು.

”ಕಳೆದ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಗಸ್ತು ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕವಾಗಿ ಜಾರಿಗೆ ತಂದರೆ ಅಪರಾಧಗಳನ್ನು ಇನ್ನೂ ತಡೆಗಟ್ಟಬಹುದು. ನಾನೇ ಠಾಣೆಗಳಿಗೆ ಮತ್ತು ಕೆಲವು ಪ್ರದೇಶಗಳಿಗೆ ದಿಢೀರ್‌ ಭೇಟಿ ನೀಡುತ್ತೇನೆ. ದಿಢೀರ್‌ ಭೇಟಿ ನೀಡುವ ಸಂದರ್ಭದಲ್ಲಿ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಸಿಬ್ಬಂದಿ ಇರದಿದ್ದರೆ ಆ ಸಿಬ್ಬಂದಿ ಜತೆಗೆ ಮೇಲಿನ ಅಧಿಧಿಕಾರಿ ಮೇಲೂ ಸ್ಥಳದಲ್ಲೇ ಕ್ರಮ ಕೈಗೊಳ್ಳುತ್ತೇನೆ. ಅನಧಿಕೃತವಾಗಿ ನಡೆಯುತ್ತಿರುವ ಸ್ಕಿಲ್‌ ಗೇಮ್‌, ಸ್ಪಾ, ಮಸಾಜ್‌ ಪಾರ್ಲರ್‌, ವೀಡಿಯೋಗೇಮ್‌ ಕೇಂದ್ರಗಳನ್ನು ಮುಲಾಜಿಲ್ಲದೆ ಬಂದ್‌ ಮಾಡಲು ಸೂಚನೆ ನೀಡಿದ್ದೇನೆ. ಡ್ರಗ್‌ ಪೆಡ್ಲರ್‌ ಮತ್ತು ಸರಗಳ್ಳರ ವಿರುದ್ಧವೂ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಿಸುತ್ತಿದ್ದೇವೆ. 2018 ಜೂನ್‌ ವರೆಗೂ ಮಾದಕ ವಸ್ತು ಜಾಲದಲ್ಲಿ ತೊಡಗಿದ್ದ 270 ಮಂದಿಯನ್ನು ಬಂಧಿಸಿ 591 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ 28 ವಿದೇಶಿಯರೂ ಸೇರಿದ್ದಾರೆ . ವೀಸಾ ಅವಧಿ ಮುಗಿದಿರುವುದೂ ಸೇರಿದಂತೆ ನುಸುಳುಕೋರರು ಸೇರಿ 107 ಮಂದಿಯ ಗಡಿಪಾರಿಗೆ ವ್ಯವಸ್ಥೆ ಮಾಡಲಾಗಿದೆ. ವಿದೇಶಾಂಗ ಇಲಾಖೆಯ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ವಿವರಿಸಿದರು.

300 ಕಡೆ ಸ್ವಯಂ ಚಾಲಿತ ಸಿಗ್ನಲ್‌

2018ರ ಜೂನ್‌ವರೆಗೂ 54 ಲಕ್ಷ 86 ಸಾವಿರ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಿದ್ದೇವೆ. ಇದರಲ್ಲಿ 55 ಕೋಟಿ ದಂಡದ ಮೊತ್ತ ಸಂಗ್ರಹವಾಗಿದೆ. 2018ರ ಜೂನ್‌ವರೆಗೂ ಬೆಂಗಳೂರು ಒಂದರಲ್ಲೇ 75 ಲಕ್ಷ 64 ಸಾವಿರ ವಾಹನಗಳು ನೋಂದಣಿ ಆಗಿವೆ. ಇಷ್ಟೊಂದು ಪ್ರಮಾಣದಲ್ಲಿ ವಾಹನಗಳ ನೋಂದಣಿ ಆಗುತ್ತಿರುವುದರಿಂದ ಸಂಚಾರ ಸಮಸ್ಯೆ ಸಹಜವಾಗಿ ಹೆಚ್ಚಾಗಿದೆ. ಸ್ವಯಂ ಚಾಲಿತ ಸಿಗ್ನಲ್‌ ಲೈಟ್‌ಗಳನ್ನು 37 ಕಡೆ ಅಳವಡಿಸಲಾಗಿದೆ. ಸಂಚಾರ ವಿಭಾಗದ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಬಾಡಿ ಕ್ಯಾಮರಾವನ್ನು ಪ್ರತೀ ಸಿಬ್ಬಂದಿಗೂ ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ರಿಯಲ್‌ ಎಸ್ಟೇಟ್‌ ದಂಧೆ ಸಹಿಸಲ್ಲ

ಪೊಲೀಸ್‌ ಠಾಣೆಗಳಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಸುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಬಗ್ಗೆ ಗಮನಕ್ಕೆ ಬಂದ ತಕ್ಷಣ ಮೇಲಿನ ಅಧಿಕಾರಿಗಳು ನಿಷ್ಠುರ ಕ್ರಮ ಜರುಗಿಸಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.

ಶುಕ್ರವಾರದ ಪರೇಡ್‌ ಕಡ್ಡಾಯ

”ಕೆಳ ಹಂತದ ಸಿಬ್ಬಂದಿಯ ಕಷ್ಟ ಸುಖ ವಿಚಾರಿಸಲು ಪ್ರತೀ ಶುಕ್ರವಾರ ನಡೆಸುವ ಪರೇಡ್‌ ಕಡ್ಡಾಯವಾಗಿರಲಿ. ಅನಿವಾರ್ಯ ಸಂದರ್ಭದಲ್ಲಿ ಕೆಲಸದ ಒತ್ತಡ ಇದ್ದಾಗ ತಿಂಗಳಿಗೆ ಎರಡು ಬಾರಿಯಾದರೂ ಪರೇಡ್‌ ನಡೆಸಿ ಕಷ್ಟ ಸುಖ ಕೇಳಿ ಪರಿಹಾರ ಒದಗಿಸಿ. ಡಿಸಿಪಿ, ಎಸಿಪಿಗಳು ತಮ್ಮ ವ್ಯಾಪ್ತಿಯ ಠಾಣೆಗಳಿಗೆ ಭೇಟಿ ನೀಡುವುದು ಕಡ್ಡಾಯ. ಸದ್ಯ 6800 ಹುದ್ದೆಗಳು ಮಾತ್ರ ಖಾಲಿ ಇವೆ. ಸಿಬ್ಬಂದಿ ನೇಮಕ ನಿರಂತರ ಪ್ರಕ್ರಿಯೆಯನ್ನಾಗಿಸಿದ್ದೇವೆ” ಎಂದರು.

ನನ್ನ ಪ್ರತಿಷ್ಠೆಯ ಪ್ರಶ್ನೆ

ಗಣೇಶ ಹಬ್ಬದ ನೆಪದಲ್ಲಿ ದುಷ್ಕರ್ಮಿಗಳು ತಮ್ಮ ಲಾಭಕ್ಕಾಗಿ ಈ ಬಾರಿ ಗಲಭೆ ಸೃಷ್ಟಿಸುವ ಸಾಧ್ಯತೆಗಳಿವೆ. ಅದಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು. ಈ ಸಂಗತಿಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ. ಗಣೇಶ ಹಬ್ಬ ಭಾವೈಕ್ಯತೆ ಮತ್ತು ಸೌಹಾರ್ದದ ಹಬ್ಬ. ದೇವರ ಹೆಸರಲ್ಲಿ ಗಲಭೆ ನಡೆಸಲು ಯಾರಿಗೂ ಅವಕಾಶ ನೀಡಬೇಡಿ ಎಂದು ಗೃಹ ಸಚಿವರು ಪತ್ರಿಕಾಗೋಷ್ಠಿಗೂ ಮುನ್ನ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಖಡಕ್‌ ಎಚ್ಚರಿಕೆ ನೀಡಿದರು.

Comments are closed.