ಕರ್ನಾಟಕ

ನಾನೊಬ್ಬ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಸರ್ಕಾರ ಬೀಳುವುದಿಲ್ಲ; ಪ್ರಿಯಾಂಕ್​​​ ಖರ್ಗೆ

Pinterest LinkedIn Tumblr


ಬೆಂಗಳೂರು: ನಾನೊಬ್ಬ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಸರ್ಕಾರ ಬೀಳುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್​​​ ಖರ್ಗೆ ಹೇಳಿದ್ದಾರೆ.

ಬಡ್ತಿ ಮೀಸಲಾತಿ ಕಾಯ್ದೆ ಜಾರಿಯಾಗದೆ ಇರುವುದಕ್ಕೆ ಅಸಮಾಧಾನಗೊಂಡಿದ್ದ ಪ್ರಿಯಾಂಕ್​​ ಖರ್ಗೆ, ಕೆಲಸ ಆಗದಿದ್ದರೆ ನಾನಿದ್ದು ಏನು ಪ್ರಯೋಜನವಿಲ್ಲ ಎಂದು ಮೊನ್ನೆ ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದರು. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಒಬ್ಬ ಸಚಿವರ ರಾಜೀನಾಮೆಯಿಂದ ಸರ್ಕಾರಕ್ಕೆ ಏನು ಆಗಲ್ಲ. ಸಚಿವರ ರಾಜೀನಾಮೆಯಿಂದ ಸರ್ಕಾರ ಅಸ್ಥಿರಗೊಳ್ಳುತ್ತದೆ ಎನ್ನುವುದೆಲ್ಲ ಸುಳ್ಳು ಎಂದರು.

ಎಸ್ ಸಿ, ಎಸ್ ಟಿ ಬಡ್ತಿ ಮೀಸಲಾತಿ ಜಾರಿಯಾಗಲೇಬೇಕು. ಇದು ನಮ್ಮ ಬದ್ದತೆ ಎಂದ ಅವರು, ಕ್ಯಾಬಿನೆಟ್ ಒಳಗೆ ನಡೆದಿದ್ದನ್ನು ನಾನು ಪಬ್ಲಿಕ್ ಮುಂದೆ ಹೇಳಲು ಇಚ್ಛಿಸಲ್ಲ. ನಾನು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್​​ ಜೊತೆ ಈ ಬಗ್ಗೆ ಮಾತಾಡಿದ್ದೇನೆ. ಜಾರಿ ಮಾಡುವ ವಿಶ್ವಾಸ ನನಗಿದೆ, ನೋಡೋಣ ಎಂದು ಹೇಳಿದರು.

ಮುಂಬಡ್ತಿ ಪಡೆದ ಎಸ್ಸಿ ಎಸ್ಟಿ ನೌಕರರ ಹಿತ ಕಾಯಲು ಹಿಂದಿನ ಕಾಂಗ್ರೆಸ್ ಸರ್ಕಾರ ಕಾನೂನು ಜಾರಿಗೆ ತಂದಿದ್ದು, ಅದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಆದರೂ ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥವಾಗುವವರೆಗೂ ಏನೂ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅನಗತ್ಯವಾಗಿ ಹಿಂದಿನ ಸರ್ಕಾರದ ಕಾನೂನು ಜಾರಿಗೊಳಿಸಲು ಜೆಡಿಎಸ್ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಪ್ರಿಯಾಂಕ್ ಖರ್ಗೆ ಕ್ಯಾಬಿನೆಟ್ ಸಭೆಯಲ್ಲಿ ಒತ್ತಾಯಿಸಿದ್ದರು. ಅಲ್ಲದೇ ಸರ್ಕಾರ ಈ ‌ಕ್ರಮಕ್ಕೆ ಮುಂದಾಗದಿದ್ದರೆ ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಏರು ಧ್ವನಿಯಲ್ಲಿ ಹೇಳಿ ಕುಮಾರಸ್ವಾಮಿ ಕ್ಯಾಬಿನೆಟ್ ಒಳಗೆ ದಂಗೆಯ ವಾತಾವರಣ ನಿರ್ಮಿಸಿದ್ದರು.

Comments are closed.