ಕರ್ನಾಟಕ

ಬೆಂಗಳೂರಿನಲ್ಲಿ ಇಂದು ಮುಂದುವರೆದ ಭಾರೀ ಮಳೆ

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಸಿಡಿಲು ಸಹಿತ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ತಗ್ಗುಪ್ರದೇಶದ ನೂರಾರು ಮನೆಗಳಿಗೆ ನೀರು ನುಗ್ಗಿ, ಜನರು ಪರದಾಡಿದರೆ, ಹತ್ತಾರು ಮರಗಳು ಧರೆಗುರುಳಿವೆ. ರಸ್ತೆಗಳೆಲ್ಲಾ ಕೆರೆಗಳಾಗಿದ್ದು ತೇಪೆ ಹಚ್ಚಿದ ರಸ್ತೆಗಳು ಕಿತ್ತು ಬರುತ್ತಿವೆ.

ಕೊರಮಂಗಲ 4th ಬ್ಲಾಕ್ ಬಳಿಯ ರಸ್ತೆಗಳೆಲ್ಲಾ ಕೆರೆಯಂತಾಗಿದ್ದು, ನೀರಿನಲ್ಲಿ ಮನೆಯಲ್ಲಿನ ಸಾಮಾನುಗಳು ತೆಲುತ್ತಿರುವುದು ಕಂಡು ಬರುತ್ತಿವೆ. ರಾಜಕಾಲುವೆ ಓವರ್ ಫ್ಲೋ ಆಗಿ ಮನೆ ಒಳಗೆ ಕೊಳಚೆ ನೀರು ಹರಿಯುತ್ತಿದೆ. ಬಿಟಿಎಂ ಬಡಾವಣೆಯ 6ನೇ ಹಂತದಲ್ಲಿ ರಸ್ತೆಗಳೆಲ್ಲಾ ಕೆರೆಯಂತಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ತೆಲಂಗಾಣ ಭಾಗದಿಂದ ಶ್ರೀಲಂಕಾ ಕಡೆಗೆ ನಡುವಿನ ಮೇಲ್ಮೈ ಸುಳಿಗಾಳಿಯಿಂದಾಗಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಇನ್ನೂ 3 ದಿನಗಳ ಕಾಲ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಮಳೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಯಾವುದೇ ಪ್ರಾಣ ಹಾನಿಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ಅವರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ತಗ್ಗುಪ್ರದೇಶದಲ್ಲಿ ವಾಸಿಸುವ ಜನರು ಅಪಾಯದ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದ್ದಾರೆ

Comments are closed.