ಕಲಬುರಗಿ/ರಾಯಚೂರು: ಭಾರೀ ಮಳೆಯಿಂದಾಗಿ ಸಿಡಿಲಿಗೆ ರಾಜ್ಯದಲ್ಲಿ ಮೂವರು ರೈತರು ಮೃತಪಟ್ಟಿದ್ದಾರೆ.
ರಾಯಚೂರಿನ ಮಡ್ಡಿಪೇಟೆಯ 52 ವರ್ಷದ ನರಸಿಂಹಲು ಸಿಡಿಲಿಗೆ ಬಲಿಯಾಗಿದ್ದಾರೆ. ನಗರದ ಹೊರವಲಯದ ಪೊತಗಲ್ ಬಳಿ ಜಮೀನಿನಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಅಷ್ಟೇ ಅಲ್ಲದೇ ಸಿಂಧನೂರಿನ ನಾಲ್ಕು ಮೈಲ್ ಕ್ಯಾಂಪ್ ನಲ್ಲಿ ಸಿಡಿಲು ಬಡಿದು ಟಿನ್‍ಶೆಡ್ ಬೆಂಕಿಗಾಹುತಿಯಾಗಿದೆ. ಜೊತೆಗೆ ಲಕ್ಷಾಂತರ ರೂಪಾಯಿ ವಸ್ತುಗಳು ಸುಟ್ಟುಹೋಗಿವೆ.
ಸಿರವಾರ ತಾಲೂಕಿನ ಹರವಿ ಹತ್ತಿರ ಗಡ್ಡಿಮೇಟಿ ಕ್ಯಾಂಪ್ ನಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಎರಡು ಎತ್ತುಗಳು ಸಾವನ್ನಪ್ಪಿವೆ. ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು ರಾತ್ರಿಯಿಡೀ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕಲಬುರಗಿಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದ ನಿವಾಸಿಯಾದ ನಾಗಪ್ಪ ಹಯ್ಯಾಳ(55) ಜಮೀನಿನಲ್ಲಿ ಕೆಲಸಮಾಡುತ್ತಿರುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ಅಲ್ಲೂರ್ ಗ್ರಾಮದ ನಿವಾಸಿ ಭಾಗ್ಯಮ್ಮ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಭಾಗ್ಯಮ್ಮ ಜೊತೆ ಮತ್ತಿಬ್ಬರಿಗೆ ಸಿಡಿಲು ಬಡಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಲದಿಂದ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಈ ಘಟನೆ ನಡೆದಿದೆ.
ಈ ಘಟನೆ ಕುರಿತು ಸೇಡಂ ಮತ್ತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.