ಕರ್ನಾಟಕ

ಶೀಘ್ರದಲ್ಲೇ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಆಹಾರ ಮೆನುವಿನಲ್ಲಿ ಕೆಲವು ಮಾರ್ಪಾಡು

Pinterest LinkedIn Tumblr


ಬೆಂಗಳೂರು: ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸದ್ಯವೇ ಮೆನು ಬದಲಾಗಲಿದೆ. ಬಿಬಿಎಂಪಿ ತನ್ನ ಸುಪರ್ದಿಯಲ್ಲಿರುವ 198 ಕ್ಯಾಂಟೀನ್‌ಗಳಲ್ಲಿ ಹೊಸ ಆಹಾರ ಪರಿಚಯಿಸುವ ಸಿದ್ಧತೆಯಲ್ಲಿದೆ.

ಕ್ಯಾಂಟೀನ್‌ಗೆ ಭೇಟಿ ಕೊಡುವವರಿಂದ ಪಾಲಿಕೆ ಸುಮಾರು 1,500 ಸಲಹೆಗಳ ಡೇಟಾಬೇಸ್ ಅನ್ನು ಸಂಗ್ರಹಿಸಿದೆ. ಕುತೂಹಲಕಾರಿ ಸಂಗತಿ ಎಂದರೆ, 1,000 ಕ್ಕಿಂತಲೂ ಹೆಚ್ಚು ಜನರು ಉಪಾಹಾರದ ಜತೆ ಚಹಾವನ್ನು ಒದಗಿಸುವಂತೆ ವಿನಂತಿಸಿದ್ದಾರೆ.

“ಚಹಾ ಮತ್ತು ಬಿಸಿ ಪಾನೀಯಗಳನ್ನು ಸಬ್ಸಿಡಿ ದರದಲ್ಲಿ ನೀಡುವಂತೆ ಜನರು ಮನವಿ ಮಾಡಿಕೊಂಡಿದ್ದಾರೆ. ಉಪಾಹಾರಕ್ಕೆ ಹೆಚ್ಚಿನ ಆಯ್ಕೆಗಳನ್ನು ಸೇರಿಸುವಂತೆ ಕೂಡ ಕೇಳಿಕೊಂಡಿದ್ದಾರೆ. ನಾವು ಸಾಧ್ಯತೆಗಳನ್ನು ಚರ್ಚಿಸುತ್ತಿದ್ದೇವೆ ಮತ್ತು ಬದಲಾವಣೆಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸುತ್ತೇವೆ “, ಎಂದು ಇಂದಿರಾ ಕ್ಯಾಂಟೀನ್ ಅಡುಗೆಗಾರರಲ್ಲಿ ಒಬ್ಬರಾದ ಗೋವಿಂದ ಪೂಜಾರಿ ತಿಳಿಸಿದ್ದಾರೆ.

” ಕ್ಯಾಂಟೀನ್ ಆಹಾರದ ಬಗ್ಗೆ ಮಾತುಕತೆಗಳು ನಡೆದಿವೆ ಮತ್ತು ಕ್ಯಾಂಟೀನ್‌ಗೆ ಹೆಚ್ಚೆಚ್ಚು ಜನರನ್ನು ಸೆಳೆಯುವಂತಾಗಲು ಬಿಬಿಎಂಪಿ ಆಹಾರ ಮೆನುವಿನಲ್ಲಿ ಕೆಲವು ಮಾರ್ಪಾಡುಗಳನ್ನು ತರಲು ಬಯಸಿದೆ. ಇದರಿಂದ ಹೆಚ್ಚಿನ ಜನರು ಕ್ಯಾಂಟೀನ್‌ಗೆ ಭೇಟಿ ನೀಡುತ್ತಾರೆ. ಹೊಸ ಆಹಾರ ಮೆನು ಶೀಘ್ರದಲ್ಲೇ ಸಿದ್ಧವಾಗಲಿದೆ, ” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಸಾರ್ವಜನಿಕರ ಸಲಹೆಯಂತೆ ಇಂದಿರಾ ಕ್ಯಾಂಟೀನ್‌ ಮೆನು ಬದಲಿಸಲು ಚಿಂತನೆ ನಡೆಸಲಾಗಿದೆ. ಅಗತ್ಯ ಬದಲಾವಣೆಗಳನ್ನು ಮಾಡಲಿದ್ದೇವೆ. ನಾವೀಗಾಗಲೆ ಅತ್ಯಂತ ಕಡಿಮೆ ದರದಲ್ಲಿ ಉಪಾಹಾರಗಳನ್ನು ನೀಡುತ್ತಿದ್ದು ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಸಿ ಪಾನೀಯಗಳನ್ನು ನೀಡಬೇಕಾಗುತ್ತದೆ. ಹೀಗಾಗಿ ಬಿಸಿ ಪಾನೀಯ ಪೂರೈಕೆ ಬಗ್ಗೆ ಇನ್ನು ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತೇವೆ,” ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

Comments are closed.