ಕರ್ನಾಟಕ

ಲೋಕಸಭೆ ಚುನಾವಣೆ: ಬೆಂಗಳೂರು ಉತ್ತರದಿಂದ ನಟಿ ರಮ್ಯಾ ಸ್ಪರ್ಧೆ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ವದಂತಿಯ ಬೆನಲ್ಲೇ ಮಾಜಿ ಸಂಸದೆ ರಮ್ಯಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ರಾಜೀನಾಮೆ ನೀಡಿರುವ ವದಂತಿಯನ್ನು ರಮ್ಯಾ ನಿರಾಕರಿಸಿದ್ದು ಸದ್ಯಕ್ಕೆ ನಾನು ರಜೆಯಲ್ಲಿದ್ದೇನೆ. ನಾಳೆಯೇ ಮರಳುತ್ತೇನೆ ಎಂದಿದ್ದಾರೆ. ಆದರೆ ಟ್ವಿಟ್ಟರ್ ಖಾತೆಯ ತಾಂತ್ರಿಕ ದೋಷದಿಂದ ಗೊಂದಲ ಸೃಷ್ಟಿಯಾಗಿದೆ ಎಂದು ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ಮೂಲಗಳ ಪ್ರಕಾರ, ರಮ್ಯಾ ಜವಾಬ್ದಾರಿಯನ್ನು ರಾಹುಲ್ ಗಾಂಧಿ ಮೊಟಕುಗೊಳಿಸಿ ಮಾರ್ಗರೇಟ್ ಆಳ್ವ ಮಗ ನಿಖಿಲ್ ಆಳ್ವಗೆ ಕೊಟ್ಟಿದ್ದು, ಇದರಿಂದ ಸಿಟ್ಟಾಗಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಕಚೇರಿಗೆ ರಮ್ಯಾ ಹೋಗಿಲ್ಲ ಎನ್ನುವ ಮಾಹಿತಿಯನ್ನು ಮೂಲಗಳು ತಿಳಿಸಿವೆ.

ರಮ್ಯಾ ಹುದ್ದೆಗೆ ರಾಜೀನಾಮೆ ನೀಡಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ವಿಚಾರ ಈಗ ಹರಿದಾಡಲು ಆರಂಭಿಸಿದೆ. ಈ ಹಿಂದೆ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮ್ಯಾ ಅವರು 11 ತಿಂಗಳ ಕಾಲ ಸಂಸದೆಯಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸೋತು ದೆಹಲಿ ರಾಜಕಾರಣದತ್ತ ಮುಖ ಮಾಡಿದ್ದ ರಮ್ಯಾ ಮತ್ತೆ ಮಂಡ್ಯ ಕಡೆಗೆ ಅಷ್ಟೇನು ಹೆಚ್ಚಿನ ಗಮನ ಹರಿಸಲಿಲ್ಲ.

ಈ ವರ್ಷ ನಡೆದ ವಿಧಾನಸಭಾ ಚುನಾವಣೆಯ ವೇಳೆ ಕರ್ನಾಟಕ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಹೆಸರಿದ್ದರೂ ಅವರು ಪ್ರಚಾರಕ್ಕೆ ಆಗಮಿಸಿರಲಿಲ್ಲ. ಅಷ್ಟೇ ಅಲ್ಲದೇ ಮತದಾನಕ್ಕೆ ಬಂದಿರಲಿಲ್ಲ. ಈ ವಿಚಾರದ ಬಗ್ಗೆ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ರಮ್ಯಾ ಮಂಡ್ಯವನ್ನು ಬಿಟ್ಟು ಬೆಂಗಳೂರು ಉತ್ತರದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. 2014ರಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಜಯಗಳಿಸಿದ್ದಾರೆ. ಅಷ್ಟೇ ಅಲ್ಲದೇ ಬಾರಿಯ ಚುನಾವಣೆಯಲ್ಲಿ ಮೈತ್ರಿ ನಡೆಯುವ ಕಾರಣ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡುವ ಸಾಧ್ಯತೆಯಿದೆ ಎಂದು ಚರ್ಚೆ ಆಗುತ್ತಿರುವ ಬೆನ್ನಲ್ಲೇ ರಮ್ಯಾ ಬೆಂಗಳೂರು ಉತ್ತರ ಕ್ಷೇತ್ರವನ್ನು ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಆರಂಭಗೊಂಡಿದೆ.

ಬೆಂಗಳೂರು ಉತ್ತರದಲ್ಲಿ ಒಕ್ಕಲಿಗರು ದೊಡ್ಡ ಪ್ರಮಾಣದಲ್ಲಿದ್ದು, ಬೆಂಗಳೂರು ಕೇಂದ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ನಿರ್ಣಾಯಕ ಪ್ರಮಾಣದಲ್ಲಿರುವ ಕಾರಣ ತಮ್ಮ ಗೆಲುವಿಗೆ ಪೂರಕವಾಗಬಹುದು ಎಂದು ರಮ್ಯ ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಚಿವ ಡಿವಿ ಸದಾನಂದ ಗೌಡ ಅವರು ಜಯಗಳಿಸಿದ್ದರು. ಈ ಬಾರಿ ಡಿವಿಎಸ್ ಕ್ಷೇತ್ರ ಬದಲಾವಣೆ ಮಾಡಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿರುವ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣದತ್ತ ಮನಸ್ಸು ಮಾಡಿದ್ದರಿಂದ ಡಿವಿಎಸ್ ಕ್ಷೇತ್ರ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ರಮ್ಯಾ ತಾಯಿ ರಂಜಿತಾ ಮಾತನಾಡಿ, ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರೇ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ನಿಲ್ಲಲ್ಲಿದ್ದಾರೆ. ರಮ್ಯಾ ಅವರು ಸ್ಥಳೀಯ ನಾಯಕರಿಗೆ ಚುನಾವಣೆ ನೇತೃತ್ವ ವಹಿಸಿಕೊಳ್ಳಲು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿರುವುದರಿಂದ ಅವರು ಬರಲು ಸಾಧ್ಯವಾಗದ್ದಕ್ಕೆ ನನ್ನನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು.

Comments are closed.