ಕರ್ನಾಟಕ

ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ದೇಶದ ಮೂಲೆ ಮೂಲೆಗೆ ತಲುಪಬೇಕು

Pinterest LinkedIn Tumblr

ಹುಬ್ಬಳ್ಳಿ: ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ದೇಶದ ಮೂಲೆ ಮೂಲೆಗೆ ತಲುಪಬೇಕು ಎಂದು ಮಾಜಿ ಸಂಸದೆ, ನರ್ಗಿಸ್ ದತ್ತ ಸ್ಮಾರಕ ಚಾರಿಟೇಬಲ್ ಟ್ರಸ್ಟ್ (ಮುಂಬೈ)ನ ಟ್ರಸ್ಟಿ ಪ್ರಿಯಾ ದತ್ತ ಹೇಳಿದರು.

ಭಾನುವಾರ ನಗರದ ಗೋಕುಲ ರಸ್ತೆ ಜವಳಿ ಗಾರ್ಡನ್​ನಲ್ಲಿ ರ್ಯಾಡನ್ ಅಂಕಾಲಜಿ ಪ್ರೖೆವೇಟ್ ಲಿಮಿಟೆಡ್​ನ ರ್ಯಾಡನ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ, ವ್ಯಕ್ತಿಗೆ ಕ್ಯಾನ್ಸರ್ ಇರುವ ಬಗ್ಗೆ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಯಾಗಬೇಕು. ಈ ಕುರಿತು ಸಮಾಜ ಹೆಚ್ಚು ತಿಳಿವಳಿಕೆ ಹೊಂದುವ ರೀತಿಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಕ್ಯಾನ್ಸರ್​ನಿಂದ ನನ್ನ ತಾಯಿ (ನರ್ಗಿಸ್ ದತ್ತ) ಮೃತಪಟ್ಟಾಗ ನಾನು 13 ವರ್ಷದವಳಿದ್ದೆ. ಆಕೆಗೆ ಅಮೆರಿಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಂಥ ಚಿಕಿತ್ಸೆ ಭಾರತದಲ್ಲೂ ಲಭ್ಯವಾಗಬೇಕೆಂದು ನನ್ನ ತಾಯಿ ಬಯಸಿದ್ದಳು. ನರ್ಗಿಸ್ ದತ್ತ ಟ್ರಸ್ಟ್​ನಿಂದ ಗ್ರಾಮೀಣ ಭಾಗದಲ್ಲಿ 100 ಕ್ಕೂ ಹೆಚ್ಚು ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಆದರೂ, ಇದು ಸಣ್ಣ ಪ್ರಯತ್ನವಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಎಷ್ಟೋ ಜನರಿಗೆ ಕ್ಯಾನ್ಸರ್​ನಿಂದ ಮೃತಪಟ್ಟಿರುವ ಬಗ್ಗೆ ಗೊತ್ತೇ ಇರುವುದಿಲ್ಲ. ಇನ್ನು ಕೆಲವರು ಕ್ಯಾನ್ಸರ್ ಕೊನೆಯ ಹಂತದಲ್ಲಿದ್ದಾಗ ಚಿಕಿತ್ಸೆಗೆ ಬರುತ್ತಾರೆ. ಸರ್ಕಾರ, ವೈದ್ಯಕೀಯ ಸಂಸ್ಥೆಗಳಷ್ಟೇ ಅಲ್ಲ, ಎಲ್ಲರೂ ಸಾಮೂಹಿಕವಾಗಿ ರೋಗ ನಿವಾರಣೆ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನಾ ಸಂಸ್ಥೆ ಸಂಸ್ಥಾಪಕ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಮಾತನಾಡಿ, 50-60 ವರ್ಷಗಳ ಹಿಂದೆ ಪ್ಲೇಗ್, ಕಾಲರಾ ಮಾರಣಾಂತಿಕ ಕಾಯಿಲೆಗಳಾಗಿದ್ದವು. ಇಂದು ಕ್ಯಾನ್ಸರ್ ಒಂದು ಸವಾಲಾಗಿದೆ. ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ಮೂಲಕ ಖಚಿತವಾಗಿ ಗುಣಪಡಿಸಬಹುದು ಎಂದರು.

ಡಾ. ಶಕುಂತಲಾಬೆನ್ ಷಾ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಡಾ. ನಮಿತಾ ಕೋಹಕ, ಯಮುನಾ ಪಾಟೀಲ ಇದ್ದರು. ರ್ಯಾಡನ್ ಅಂಕಾಲಜಿ ಪ್ರೖೆವೇಟ್ ಲಿಮಿಟೆಡ್ ಚೇರಮನ್ ಡಾ. ಶಶಿಕಾಂತ ಕುಲಗೋಡ ಸ್ವಾಗತಿಸಿದರು. ಎಂಡಿ ಡಾ. ಸಂಜೀವ ಕುಲಗೋಡ ಪ್ರಾಸ್ತಾವಿಕ ಮಾತನಾಡಿದರು. ಶೀತಲ ಕುಲಗೋಡ ಪರಿಚಯಿಸಿದರು.

Comments are closed.