ಕರ್ನಾಟಕ

ಉಪಚುನಾವಣೆಯ 3 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿದ ಬಿಜೆಪಿ

Pinterest LinkedIn Tumblr


ಬೆಂಗಳೂರು: ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯ ತಲೆನೋವಿನ ಘಟ್ಟವನ್ನು ಬಹುತೇಕ ಮುಕ್ತಾಯಗೊಳಿಸಿದೆ. ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ 2 ಲೋಕಸಭೆ ಮತ್ತು 1 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿದೆ. ಒಂದು ಲೋಕಸಭೆ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆಗೆ ಬಿಎಸ್​ವೈ ನಿರ್ಧಾರವೇ ಅಂತಿಮವಾಗಲಿದೆ. ಇದರ ಜೊತೆಗೆ, 3 ಲೋಕಸಭೆ ಮತ್ತು 2 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರತಿಯೊಂದಕ್ಕೂ ಉಸ್ತುವಾರಿಗಳನ್ನ ಹೆಸರಿಸಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಅವರ ಹೆಸರು ಅಂತಿಮಗೊಂಡಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶ್ರೀರಾಮುಲು ಸೋದರಿ ಜೆ. ಶಾಂತಾ ಅವರನ್ನು ಸ್ಪರ್ಧೆಗಿಳಿಸಲು ಒಪ್ಪಿಸಲಾಗಿದೆ. ಜಮಖಂಡಿ ಕ್ಷೇತ್ರದಲ್ಲಿ ಶ್ರೀಕಾಂತ್ ಕುಲಕರ್ಣಿಯವರನ್ನ ಅಭ್ಯರ್ಥಿಯನ್ನಾಗಿ ಫೈನಲ್ ಮಾಡಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಲ್ಲ. ಅವೆರಡು ಕ್ಷೇತ್ರಗಳಲ್ಲಿ ಬಿಎಸ್​ವೈ ಅವರ ನಿರ್ಧಾರವೇ ಅಂತಿಮವಾಗಲಿದೆ ಎಂದು ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ಕೊಡುವುದು ನಿರೀಕ್ಷಿತವೇ ಆಗಿತ್ತು. ಉಪಚುನಾವಣೆ ದಿನಾಂಕ ಪ್ರಕಟವಾದ ಕೆಲ ಹೊತ್ತಲ್ಲೇ ಯಡಿಯೂರಪ್ಪನವರು ಶಿವಮೊಗ್ಗ ಕ್ಷೇತ್ರಕ್ಕೆ ತಮ್ಮ ಮಗನ ಹೆಸರನ್ನು ಘೋಷಿಸಿಬಿಟ್ಟಿದ್ದರು.

ಆದರೆ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲು ಯಾರೂ ಮಾನಸಿಕವಾಗಿ ಸಜ್ಜಾಗಿರಲಿಲ್ಲ. ಶ್ರೀರಾಮುಲು ಸೋದರಿ ಶಾಂತಾ, ಸಣ್ಣ ಫಕೀರಪ್ಪ ಮತ್ತು ಎನ್.ವೈ. ಹನುಮಂತಪ್ಪ ಅವರ ಹೆಸರು ಚಾಲನೆಯಲ್ಲಿತ್ತಾದರೂ ಈ ಮೂವರೂ ಸ್ಪರ್ಧೆಗೆ ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯವರೆಗೂ ಬಿಜೆಪಿ ಹತಾಶೆಯಲ್ಲಿತ್ತು. ಆದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಶಾಂತಾ ಅವರ ಮನವೊಲಿಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾದರೆನ್ನಲಾಗಿದೆ. ಇವತ್ತು ಅವರ ಹೆಸರನ್ನು ಚುನಾವಣಾ ಸಮಿತಿಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಕಾಂತ್ ಕುಲಕರ್ಣಿ ಮತ್ತು ಸಂಗಮೇಶ್ ನಿರಾಣಿ ಅವರಿಬ್ಬರ ನಡುವೆ ಟಿಕೆಟ್​ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಶ್ರೀಕಾಂತ್ ಕುಲಕರ್ಣಿ ಅವರ ಹೆಸರು ಅಂತಿಮಗೊಂಡಿದೆ. ಮುರುಗೇಶ್ ನಿರಾಣಿ ಮೂಲಕ ಸಂಗಮೇಶ್ ಅವರನ್ನ ಸ್ಪರ್ಧೆಯಿಂದ ಹಿಂಸರಿಯುವಂತೆ ಮನವೊಲಿಸಲಾಗಿತ್ತು. ಆದರೆ, ಬಿಜೆಪಿಯೊಳಗೆಯೇ ಶ್ರೀಕಾಂತ್ ಕುಲಕರ್ಣಿ ಸ್ಪರ್ಧೆಗೆ ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಕೊನೆಗೆ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ.

ಉಸ್ತುವಾರಿಗಳ ನಿಯೋಜನೆ:
ಐದು ಕ್ಷೇತ್ರಗಳಲ್ಲಿ ಬಿಜೆಪಿಯು ಉಸ್ತುವಾರಿಗಳನ್ನ ಆಯ್ಕೆ ಮಾಡಿದೆ. ಒಂದೊಂದು ಕ್ಷೇತ್ರದಲ್ಲಿ ಬಹು ಉಸ್ತುವಾರಿಗಳಿರಲಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿಗಳನ್ನ ಪ್ರಕಟಿಸಲಾಗಿದೆ. ಆರ್. ಅಶೋಕ್, ಪ್ರತಾಪ್ ಸಿಂಹ ಅವರನ್ನ ಮಂಡ್ಯಕ್ಕೆ ಜೋಡಿಸಲಾಗಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ವೀರೋಚಿತ ಸೋಲನುಭವಿಸಿದ್ದ ಸಿ.ಪಿ. ಯೋಗೇಶ್ವರ್ ಅವರು ರಾಮನಗರದ ಉಸ್ತುವಾರಿಯಾಗಿ ಮುಖ್ಯಮಂತ್ರಿಗಳ ಅಡ್ಡೆಗೆ ಕೈಹಾಕಲಿದ್ದಾರೆ. ಅವರ ಜೊತೆ ಸದಾನಂದಗೌಡ, ಮುನಿರಾಜುಗೌಡ ಮೊದಲಾದವರಿರುತ್ತಾರೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರ: ಕೆ.ಎಸ್. ಈಶ್ವರಪ್ಪ, ಜಿ.ಎಂ. ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಪಿ. ರಾಜೀವ್, ಸುನೀಲ್ ಕುಮಾರ್, ಮಾಜಿ ಸಚಿವ ಜೀವರಾಜ್ ಅವರು ಉಸ್ತುವಾರಿಗಳು.

ಬಳ್ಳಾರಿ ಲೋಕಸಭೆ ಕ್ಷೇತ್ರ: ರಮೇಶ್ ಜಿಗಜಿಣಗಿ, ಶ್ರೀರಾಮುಲು, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಎನ್. ರವಿಕುಮಾರ್, ಪ್ರಭು ಚೌಹಾಣ್, ರಾಮಣ್ಣ ಲಮಾಣಿ ಉಸ್ತುವಾರಿಗಳು.

ಮಂಡ್ಯ ಲೋಕಸಭೆ ಕ್ಷೇತ್ರ: ಆರ್. ಅಶೋಕ್, ಪ್ರತಾಪ್ ಸಿಂಹ, ನಾಗೇಂದ್ರ , ಡಿ.ಎಸ್. ವೀರಯ್ಯ ಉಸ್ತುವಾರಿ

ಜಮಖಂಡಿ ವಿಧಾನಸಭಾ ಕ್ಷೇತ್ರ: ಜಗದೀಶ್ ಶೆಟ್ಟರ್, ಪ್ರಭಾಕರ್ ಕೋರೆ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಗದ್ದಿ ಗೌಡರ್ ಉಸ್ತುವಾರಿಗಳು.

ರಾಮನಗರ ವಿಧಾನಸಭಾ ಕ್ಷೇತ್ರ: ಸದಾನಂದ ಗೌಡ, ಮುನಿರಾಜು ಗೌಡ, ಸಿ.ಪಿ. ಯೋಗೇಶ್ವರ್, ಎ. ನಾರಾಯಣಸ್ವಾಮಿ ಉಸ್ತುವಾರಿಗಳು.

Comments are closed.