ಕರ್ನಾಟಕ

ಹಾಸನಾಂಬೆ ದೇಗುಲದ ಪವಾಡ; ಜಿಲ್ಲಾಡಳಿತದ ಮೇಲೆ ಒತ್ತಡ ತರಲು ತೀರ್ಮಾನಿಸಿದ ವಿಚಾರವಾದಿಗಳು

Pinterest LinkedIn Tumblr


ಹಾಸನ: ಪ್ರಸಿದ್ಧ ಹಾಸನಾಂಬೆಯ ಕೆಲವು ಪವಾಡಗಳು ನಡೆಯುತ್ತವೆಂಬ ನಂಬಿಕೆ ಆಸ್ತಿಕರಲ್ಲಿ ಬಲವಾಗಿದೆ. ಅಂತೆಯೇ ಪ್ರತಿ ವರ್ಷದ ಇವೇ ಪವಾಡಗಳನ್ನ ವೀಕ್ಷಿಸಲು ಲಕ್ಷೋಪಾದಿಯಾಗಿ ಹಾಸನಾಂಬೆಯ ದರ್ಶನಕ್ಕೆ ಪ್ರತೀ ವರ್ಷ ಜನರು ಹೋಗುವುದುಂಟು. ಮುಂದಿನ ತಿಂಗಳ ಮೊದಲ ವಾರದಲ್ಲಿ ಹಾಸನಾಂಬೆಯು ವಿಶ್ವರೂಪ ದರ್ಶನ ನೀಡುತ್ತಾಳೆ ಎಂದು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಈ ವೇಳೆ, ಹಾಸನಾಂಬೆಯ ಪವಾಡಗಳೆಲ್ಲಾ ಸುಳ್ಳು ಎಂದು ನಿರೂಪಿಸಲು ಕೆಲ ವಿಚಾರವಾದಿಗಳ ಗುಂಪುಗಳು ಪ್ರಯತ್ನಿಸುತ್ತಿವೆ. ಭಾರತ ಜ್ಞಾನ ವಿಜ್ಞಾನ ಸಮಿತಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಾಸನಾಂಬೆ ದೇಗುಲದ ಪವಾಡಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪವಾಡದ ಹೆಸರಲ್ಲಿ ಜನರ ಭಾವನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದೇವಸ್ಥಾನದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಇವೆಲ್ಲವೂ ಸೃಷ್ಟಿತ ಪವಾಡಗಳು ಎಂಬ ತೀರ್ಮಾನಕ್ಕೆ ಸಭೆ ಬಂದಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ, ಡಿಎಸ್​ಎಸ್, ಸಿಪಿಐಎಂ ಸಂಘಟನೆಗಳು ಈ ಸಭೆಯಲ್ಲಿ ಭಾಗಿಯಾಗಿದ್ದವು.

ಹಾಸನಾಂಬೆಯ ಪವಾಡಗಳನ್ನು ಬಯಲು ಮಾಡುವಂತೆ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಲಾಯಿತು. ಒಂದು ವೇಳೆ ಪವಾಡದ ವಾಸ್ತವತೆಯನ್ನು ಬಯಲಿಗೆಳೆಯಲು ಜಿಲ್ಲಾಡಳಿತ ಮುಂದಾಗದೇ ಹೋದರೆ ನ್ಯಾಯಾಲಯದ ಮೆಟ್ಟಿಲೇರಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಏನೇನು ಪವಾಡಗಳು?

ಹಾಸನ ನಗರದಲ್ಲಿರುವ ಹಾಸನಾಂಬ ದೇವಸ್ಥಾನದ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ತೆರೆಯಲ್ಪಡುತ್ತದೆ. ಅದೂ ಕೆಲ ದಿನಗಳವರೆಗೂ ಮಾತ್ರ ಹಾಸನಾಂಬೆಯ ದರ್ಶನ ಲಭ್ಯವಿರುತ್ತದೆ. ಉಳಿದ ದಿನವೆಲ್ಲವೂ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ದೇವಸ್ಥಾನ ತೆರೆದಾಗ ಬೆಳಗಿಸುವ ಜ್ಯೋತಿ, ದೇವಿಗೆ ಹಾಕುವ ಹೂವಿನ ಹಾರ, ಭಕ್ತರು ಇಡುವ ಪ್ರಸಾದ ಇತ್ಯಾದಿ ವಸ್ತುಗಳು ಮರು ವರ್ಷ ಬಾಗಿಲು ತೆರೆಯುವವರೆಗೂ ಕೆಡದೇ ಹಾಗೇ ಇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ವರ್ಷಕ್ಕೊಮ್ಮೆ ಇಲ್ಲಿ ಬಾಗಿಲು ತೆರೆದಾಗ ಆ ವಸ್ತುಗಳೆಲ್ಲ ಹಾಗೇ ಇರುವುದನ್ನು ಜನರು ಕಣ್ಣಾರೆ ಕಾಣಬಹುದು.

ಆದರೆ, ಇದೆಲ್ಲವೂ ಸುಳ್ಳು. ಪವಾಡದ ಹೆಸರಲ್ಲಿ ಜನರನ್ನು ಮೋಸ ಮಾಡಲಾಗುತ್ತಿದೆ ಎಂಬುದು ಪವಾಡ ಭಂಜಕರ ವಾದವಾಗಿದೆ. ಈ ನಾಸ್ತಿಕರ ಕ್ರಮವು ಹೊಸ ವಿವಾದಕ್ಕೆ ಎಡೆ ಮಾಡಿಕೊಡುತ್ತಾ? ಹಾಸನಾಂಬೆ ಮತ್ತು ಆಕೆಯ ಭಕ್ತರ ಆಕ್ರೋಶಕ್ಕೆ ನಾಸ್ತಿಕರು ಗುರಿಯಾಗುತ್ತಾರಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇದು ಹಿಂದುತ್ವ ಹೀಗಳೆಯುವ ಷಡ್ಯಂತ್ರವೇ?
ನಮ್ಮ ಸಮಾಜದಲ್ಲಿರುವ ಎಲ್ಲಾ ಕಷ್ಟ-ಕಾರ್ಪಣ್ಯ, ಮೌಢ್ಯತೆಗಳಿಗೂ ಹಿಂದುತ್ವವೇ ಕಾರಣ ಎಂದು ಬಿಂಬಿಸುವ ದೊಡ್ಡ ಷಡ್ಯಂತ್ರವು ನಡೆಯುತ್ತಿರುವ ಸುದ್ದಿ ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಕ್ರೈಸ್ತ ಮಿಷನರಿಗಳು ಈ ಸಂಚಿನ ಪ್ರಾಯೋಜಕರಾಗಿದ್ದು, ನಕ್ಸಲರು ಸೇರಿದಂತೆ ಹಿಂದೂ ವಿರೋಧಿ ಸಂಘಟನೆಗಳ ಮೂಲಕ ಹಿಂದುತ್ವದ ಆತ್ಮವನ್ನು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿರುವ ಬಗ್ಗೆಯೂ ಈ ಸುದ್ದಿಯಲ್ಲಿ ತಿಳಿಸಲಾಗಿದೆ. ಹಿಂದೂ ಧರ್ಮವು ಕೇವಲ ಮೌಢ್ಯತೆಯ ಧರ್ಮವಾಗಿದೆ ಎಂದು ಬಿಂಬಿಸಿ ಕೆಲ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಲೇಖನಗಳು ಪ್ರಕಟವಾಗಿರುವುದೂ ಈ ಸಂಚಿನ ಒಂದು ಭಾಗವಾಗಿದೆ ಎಂಬ ಆಪಾದನೆ ಇದೆ.

ಈ ಹಿನ್ನೆಲೆಯಲ್ಲಿ ಹಾಸನಾಂಬೆಯ ದೇವಸ್ಥಾನದ ಪವಾಡ ಭಂಜಿಸಲು ಕೆಲ ಸಂಘಟನೆಗಳು ಸಂಕಲ್ಪ ತೊಟ್ಟಿರುವ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ.

Comments are closed.