ಕರ್ನಾಟಕ

ಜನವರಿ 1ರೊಳಗೆ ಮತದಾರರ ಪಟ್ಟಿಯಲ್ಲಿ ನಿಮ್ಮ ಸೇರ್ಪಡೆಗೊಳಿಸಿ

Pinterest LinkedIn Tumblr


ಬೆಂಗಳೂರು: ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯ ನಡೆಯುತ್ತಿದೆ. 2019ರ ಜನವರಿ 1ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅವಕಾಶ ನೀಡಲಾಗಿದೆ. ಈಗಿರುವ ಮತದಾರರ ಪಟ್ಟಿಯಲ್ಲಿನ ಹೆಸರು ತಿದ್ದುಪಡಿಗೆ ಅಕ್ಟೋಬರ್ 10ರಿಂದ ನವೆಂಬರ್ 10ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜೀವ್ ಕುಮಾರ್, ಜನವರಿ 4ರಂದು ನೂತನ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟವಾಗುತ್ತದೆ. ಪರಿಷ್ಕೃತ ಪಟ್ಟಿಯಲ್ಲಿ ಹೆಸರು ಇದ್ದರಷ್ಟೇ ಮತ ಹಾಕುವ ಅವಕಾಶವಿರುತ್ತದೆ. ಹೀಗಾಗಿ ಎಲ್ಲರೂ ಆ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಹಾಗೆಯೆ, 2019ರ ಜನವರಿ 1ಕ್ಕೆ 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿ ಸೇರ್ಪಡೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಅಲ್ಪಾವಧಿಗೋಸ್ಕರ 3 ಲೋಕಸಭೆ ಉಪಚುನಾವಣೆ ನಡೆಸುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂಬ ಆರೋಪವನ್ನು ಚುನಾವಣಾಧಿಕಾರಿಗಳು ತಳ್ಳಿಹಾಕಿದ್ದಾರೆ.

ಕೆಲವರಲ್ಲಿ ಆ ಗೊಂದಲ ಇರಬಹುದು. ಆದರೆ, ಚುನಾವಣಾ ಆಯೋಗಕ್ಕೆ ಯಾವ ಗೊಂದಲವೂ ಇಲ್ಲ. ಆಯೋಗದ ನಿಯಮದ ಪ್ರಕಾರವೇ ಉಪಚುನಾವಣೆ ನಡೆಯುತ್ತಿದೆ. ಖಾಲಿಬಿದ್ದ 6 ತಿಂಗಳ ಅವಧಿಯಲ್ಲಿ ಚುನಾವಣೆ ನಡೆಸಬೇಕೆಂಬ ನಿಯಮದ ಪ್ರಕಾರವೇ ನಾವು ತೀರ್ಮಾನ ಕೈಗೊಂಡಿದ್ದೇವೆ.

ಕ್ಷೇತ್ರ ಖಾಲಿಬಿದ್ದು ಒಂದು ವರ್ಷದೊಳಗೆ ಸಾರ್ವತ್ರಿಕ ಚುನಾವಣೆ ನಡೆಯುವುದಿದ್ದರೆ ಆ ಕ್ಷೇತ್ರಕ್ಕೆ ಉಪಚುನಾವಣೆಯ ಅಗತ್ಯವಿಲ್ಲ ಎಂಬ ನಿಯಮವೂ ಇದೆ. ಆದರೆ, ಸಾರ್ವತ್ರಿಕ ಚುನಾವಣೆ ಜೂನ್ ನಂತರ ನಡೆಯುವ ಸಾಧ್ಯತೆ ಇದೆ. ಈಗ ಉಪಚುನಾವಣೆ ಕಾಣುತ್ತಿರುವ ಕ್ಷೇತ್ರಗಳು ಮೇ ತಿಂಗಳಲ್ಲೇ ಖಾಲಿಬಿದ್ದಿವೆ. ಹೀಗಾಗಿ, ಈ ನಿಯಮವನ್ನು ಆಚರಣೆಗೆ ತರಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ತೀರ್ಮಾನ ಕಾನೂನುಬದ್ಧವಾಗಿಯೇ ಇದೆ ಎಂದು ಕೆಲ ಕಾನೂನುತಜ್ಞರು ಅಭಿಪ್ರಾಯಪಟ್ಟಿರುವುದನ್ನು ಇಲ್ಲಿ ಗಮನಿಸಬಹುದು.

ಬೆಂಗಳೂರಿನ ಮತದಾರರ ವಿವರ:
ಒಟ್ಟು ಮತದಾರರು: 89,57,064
ಪುರುಷ ಮತದಾರರು: 46,76,643
ಮಹಿಳಾ ಮತದಾರರು: 42,80,421

ವಿಧಾನಸಭಾ ಚುನಾವಣೆಯ ವೇಳೆ 91 ಲಕ್ಷಕ್ಕೂ ಹೆಚ್ಚು ಮತದಾರಿದ್ದರು. ಪರಿಷ್ಕರಣೆಯ ವೇಳೆ ಡೂಪ್ಲಿಕೇಟ್ ಐಡಿಗಳನ್ನ ಪತ್ತೆ ಮಾಡಿ ಒಟ್ಟು 1,83,111 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ನಗರದ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯು ಸಾರ್ವಜನಿಕರಿಗೆ ಲಭ್ಯವಿದೆ. ಆಯಾ ಕ್ಷೇತ್ರಗಳ ನೊಂದಣಾಧಿಕಾರಿ ಕಚೇರಿ, ಸಹಾಯಕ ನೊಂದಣಾಧಿಕಾರಿ ಕಚೇರಿ, ವಾರ್ಡ್ ಕಚೇರಿಗಳಲ್ಲಿ ಮತದಾರರ ಪಟ್ಟಿ ಲಭ್ಯವಿದ್ದು, ಸಾರ್ವಜನಿಕರು ಪರಿಶೀಲನೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಅನುಮಾನ ಹುಟ್ಟಿಸಿದ ಮತದಾರರ ಪ್ರಮಾಣ:
ಬೆಂಗಳೂರಿನ ಕೆಲ ಕ್ಷೇತ್ರಗಳಲ್ಲಿ ಮತದಾರರ ಪ್ರಮಾಣ ಅಹಜವೆನಿಸುವಷ್ಟು ಹೆಚ್ಚು-ಕಡಿಮೆ ಇರುವುದು ತಿಳಿದುಬಂದಿದೆ. ಮತದಾರರ ಸಂಖ್ಯೆಯ ಅಥವಾ ಎಲೆಕ್ಟೋರಲ್ ಪಾಪುಲೇಶನ್(ಇಪಿ)ನ ಅನುಪಾತದಲ್ಲಿ ಹೆಚ್ಚು ವ್ಯತ್ಯಾಸ ಇರುವ ಕ್ಷೇತ್ರಗಳನ್ನ ಗುರುತಿಸಿ ಪರಿಸ್ಥಿತಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಏನಿದು ಇಪಿ ರೇಷಿಯೋ?
ಕ್ಷೇತ್ರದಲ್ಲಿ 18 ವಯೋಮಾನ ದಾಟಿದ ಒಟ್ಟು ಜನಸಂಖ್ಯೆ ಹಾಗೂ ಮತದಾರರ ಪಟ್ಟಿಯಲ್ಲಿರುವ ಪ್ರಮಾಣದ ನಡುವಿನ ವ್ಯತ್ಯಾಸವೇ ಎಲೆಕ್ಟೋರಲ್ ಪಾಪುಲೇಶನ್ ಅನುಪಾತವಾಗಿರುತ್ತದೆ. ಬೆಂಗಳೂರಿನ ಬಿಟಿಎಂ ಲೇಔಟ್​ನಲ್ಲಿ ಶೇ. 56.59 ಇಪಿ ರೇಷಿಯೋ ಇದೆ ಎನ್ನಲಾಗಿದೆ.

Comments are closed.