ಕರ್ನಾಟಕ

ಮಂಡ್ಯ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ: ಯಡಿಯೂರಪ್ಪ ಘೋಷಣೆ

Pinterest LinkedIn Tumblr


ಶಿವಮೊಗ್ಗ: ಮೂರು ಲೋಕ ಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಭ್ಯರ್ಥಿ ಹುಡುಕಾಟದ ಹಿಂದೆ ಬಿದ್ದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್​ ಮತ್ತು ಜೆಡಿಎಸ್​ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿ ನೀಡಲು ಉತ್ತಮ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ಈ ನಡುವೆಯೇ ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಡಾ. ಸಿದ್ದರಾಮಯ್ಯ ಎಂಬುವವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಡಾ. ಸಿದ್ದರಾಮಯ್ಯ ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು, ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಡಾ. ಸಿದ್ದರಾಮಯ್ಯ ದಶಕಗಳ ಕಾಲ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಡಾ. ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಮಾತನಾಡಿದ ಯಡಿಯೂರಪ್ಪ, ರಾಮನಗರ ವಿಧಾನಸಭಾ ಕ್ಷೇತ್ರಕ್ಕೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ಆದರೆ ಡಾ. ಸಿದ್ದರಾಮಯ್ಯ ಯಾರೆಂಬುದೇ ಹೆಚ್ಚಿನ ಜನರಿಗೆ ಗೊತ್ತಿಲ್ಲ, ಹೀಗಿರುವಾಗ ಪ್ರಬಲ ಪೈಪೋಟಿ ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುವ ಆತ್ಮವಿಶ್ವಾಸ ತೋರಿದ್ದ ಬಿಜೆಪಿ ಮಂಡ್ಯದಲ್ಲಿ ಶಸ್ತ್ರತ್ಯಾಗ ಮಾಡಿದೆಯಾ ಎಂಬ ಪ್ರಶ್ನೆಯೂ ಮೂಡಿದೆ. ಯಾಕೆಂದರೆ ಜೆಡಿಎಸ್​ ಪ್ರಾಬಲ್ಯದ ಜಿಲ್ಲೆಯಲ್ಲಿ ಪ್ರತಿರೋಧ ಅಸಾಧ್ಯ ಎಂಬ ಕಾರಣಕ್ಕೆ ಹೆಚ್ಚು ಜನಪ್ರಿಯರಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ಧಾರ ಎಂಬ ಮಾತುಗಳೂ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

Comments are closed.