ಕರ್ನಾಟಕ

ಶಿಕ್ಷಣ ಸಚಿವ ಮಹೇಶ್​ ರಾಜೀನಾಮೆ ಬಿಎಸ್​​ಪಿ ಆಂತರಿಕ ವಿಚಾರ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಶಿಕ್ಷಣ ಸಚಿವ ಎನ್​. ಮಹೇಶ್​ ರಾಜೀನಾಮೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ರಾಜೀನಾಮೆ ನೀಡಿರುವುದು ಬಿಎಸ್​ಪಿ ಪಕ್ಷದ ಆಂತರಿಕ ವಿಚಾರ ಎಂದಿದ್ದಾರೆ.

ಮಹೇಶ್​ ರಾಜೀನಾಮೆ ನೀಡಿದ ಗಂಟೆಗಳ ಅಂತರದಲ್ಲಿ ಮಾತನಾಡಿದ ಕುಮಾರಸ್ವಾಮಿ ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದರು. ಕೆಲವು ವಿಷಯಗಳ ಬಗ್ಗೆ ನಾನು ಹೇಳೋಕೆ ಆಗೋದಿಲ್ಲ, ಅದು ಅವರ ಪಕ್ಷದ ಆಂತರಿಕ ವಿಚಾರ. ಪಕ್ಷದ ಸಂಘಟನೆ ಸಾಧ್ಯವಾಗಿಲ್ಲ ಅಂತ ರಾಜೀನಾಮೆ ಕೊಟ್ಟಿರಬಹುದು. ರಾಜೀನಾಮೆ ಅಂಗೀಕಾರ ವಿಚಾರ ನೋಡೋಣ, ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಎಸ್ ಪಿ ನಾಯಕರು ನನ್ನ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ ಎಂದಿರುವ ಕುಮಾರಸ್ವಾಮಿ, ಕೆಲ ವಿಷಯವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು. ಜತೆಗೆ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಆದರಿದು ಸೂಕ್ತ ಸಮಯವಲ್ಲ ಎಂದರು.

ರಾಜೀನಾಮೆ ಇಂದು ಅಂಗೀಕಾರ?:

ಕಾಂಗ್ರೆಸ್​​ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸಿಎಂ ಈ ಬಗ್ಗೆ ಹಿಂದೆಯೇ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಬಿಎಸ್ಪಿ ನಡುವೆ ಮೈತ್ರಿ ಮುರಿದಾಗಲೇ ಈ ತೀರ್ಮಾನ ಆಗಿತ್ತು ಎಂದೂ ಮೂಲಗಳು ಹೇಳುತ್ತಿವೆ. ಎನ್ ಮಹೇಶ್ ರಾಜೀನಾಮೆ ಪಡೆಯಲು ಕುಮಾರಸ್ವಾಮಿ ಅವರಿಗೆ ರಾಹುಲ್ ಗಾಂಧಿ ಸೂಚಿಸಿದ್ದರು, ದೆಹಲಿಯಲ್ಲಿ ಭೇಟಿಯಾದಾಗ ಸೂಚನೆ ನೀಡಲಾಗಿತ್ತು ಎಂದು ಕಾಂಗ್ರೆಸ್​ ಉನ್ನತ ಮೂಲಗಳು ತಿಳಿಸಿವೆ.

ಈ ಕಾರಣದಿಂದಲೇ ರಾಜೀನಾಮೆಯನ್ನು ಕುಮಾರಸ್ವಾಮಿ ಕೇಳುವ ಮುನ್ನ ತಾವಾಗಿಯೇ ಮಹೇಶ್​ ರಾಜೀನಾಮೆ ನೀಡಿದರು ಎಂದೂ ಹೇಳಲಾಗುತ್ತಿದೆ.

Comments are closed.