ಕರ್ನಾಟಕ

ತನ್ನ 50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಅಪರಿಚಿತ ಯುವಕನ ಕೊಲೆ: ಹತ್ಯೆಗೀಡಾಗಿದ್ದು ತಾನೆ ಎಂದು ಬಿಂಬಿಸಲು ಹೊರಟವ ಶ್ರೀರಾಮನ ಹಚ್ಚೆಯಿಂದ ಸಿಕ್ಕಿಬಿದ್ದ

Pinterest LinkedIn Tumblr


ಹುಬ್ಬಳ್ಳಿ: ರಸ್ತೆ ವಿಭಜಕದ ಬಳಿ ಭೀಕರ ರಸ್ತೆ ಅಪಘಾತದ ದೃಶ್ಯ, ಹೆಣವಾಗಿದ್ದ ಯುವಕನ ಮುಖದ ಗುರುತೇ ಸಿಗದಷ್ಟು ಘಾಸಿಗೊಂಡು ಬಿದ್ದಿದ್ದ ಯುವಕನೊಬ್ಬನ ಹೆಣ. ಸ್ಥಳದಲ್ಲಿದ್ದ ಬೈಕ್… ಇದನ್ನು ನೋಡಿದರೆ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತವಾದ ದೃಶ್ಯದಂತಿತ್ತು. ಅದುವೇ ಈ ಪ್ರಕರಣದ ಆರೋಪಿಯ ಮಾಸ್ಟರ್ ಪ್ಲಾನ್ ಆಗಿತ್ತು.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಬೈಕ್ ಅಪಘಾತವಾಗಿದೆ ಎಂದು ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಯುವಕ ಸಾವನ್ನಪ್ಪಿದ್ದಾನೆಂದು ಮೇಲ್ನೋಟಕ್ಕೆ ಕಂಡುಬರುತ್ತಿತ್ತು. ಯುವಕನ ಮುಖ ತೀವ್ರವಾಗಿ ನಜ್ಜುಗುಜ್ಜಾಗಿದ್ದ ಪರಿಣಾಮ ಗುರುತು ಸಿಗುತ್ತಿರಲಿಲ್ಲ. ಗೋಕುಲ ರಸ್ತೆ ಪೊಲೀಸರು ಸ್ಥಳದ ಪಂಚನಾಮೆ‌ ನಡೆಸಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಸಿದ್ಧತೆ ನಡೆಸಿದ್ದರು. ಬೈಕ್ ನಂಬರ್ ಪರಿಶೀಲನೆ ಮಾಡಿದಾಗ ಅದು ಗೋಕುಲ ಗ್ರಾಮದ ಸಂಜು ಬೆಂಗೇರಿ ಎಂಬಾತನಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ಸಂಜು ಬೆಂಗೇರಿಯ ಮನೆಗೆ ಸುದ್ದಿ ಮುಟ್ಟಿಸಿದ್ದರು.

ಹಚ್ಚೆಯ ಗುರುತಿರಲಿಲ್ಲ:

ಸ್ಥಳಕ್ಕೆ ಆಗಮಿಸಿದ ಸಂಜು ಬೆಂಗೇರಿಯ ಅಣ್ಣ ಮಂಜು ಬೆಂಗೇರಿ ಈ ಮೃತದೇಹವನ್ನು ನೋಡಿ, ಅದು ತನ್ನ ತಮ್ಮನದ್ದಲ್ಲ ಎಂದಿದ್ದ. ಸಂಜು ಕೈಮೇಲೆ ಜೈ ಶ್ರೀರಾಮ ಎನ್ನುವ ಹಚ್ಚೆ ಗುರುತು ಇದೆ. ಮೃತದೇಹದ ಕೈಮೇಲೆ ಹಚ್ಚೆಯಿಲ್ಲ ಎಂದಿದ್ದ. ಆದರೆ ಮೃತದೇಹದ ಬಟ್ಟೆ, ಚಪ್ಪಲಿ ಮತ್ತು ಅಲ್ಲಿರುವ ಬೈಕ್ ಸಂಜುಗೆ ಸೇರಿದ್ದು ಎಂದು ಗುರುತಿಸಿದ್ದ. ಹೀಗಾಗಿ ಗೊಂದಲಕ್ಕೀಡಾದ ಪೊಲೀಸರು ಮೆಲಧಿಕಾರಿಗಳಿಗೆ ವಿಷಯ ತಿಳಿಸಿದ್ದರು.‌ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳಿಗೆ ಘಟನಾ ಸ್ಥಳದ ಸಂಪೂರ್ಣ ವೀಕ್ಷಣೆಯ ನಂತರ ಇದು ಅಪಘಾತವಲ್ಲ, ಕೊಲೆ ಎಂಬುದು ಗೊತ್ತಾಗಿತ್ತು.

ಇನ್ಷೂರೆನ್ಸ್ ಹಣಕ್ಕೆ ಸ್ಕೆಚ್ಚು:
ಘಟನೆಯ ಕುರಿತು ಸಮಗ್ರ ತನಿಖೆಗೆ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಅವರು ವಿಶೇಷ ತಂಡ ರಚಿಸಿದ್ದರು. ತತ್​ಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಸಂಜುನನ್ನು ಹುಡುಕಲು ಆರಂಭಿಸಿದ್ದರು. ಆದರೆ ಪೊಲೀಸರಿಗೆ ಸಂಜು ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸಂಜು ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಆತನ‌ ಸ್ನೇಹಿತರಾದ ಮಹಾಂತೇಶ್ ದುಗ್ಗಾನಿ ಹಾಗೂ ಅಮೀರ್ ಶೇಖ್‌ರನ್ನು ಠಾಣೆಗೆ ಕರೆತಲಾಯಿತು. ವಿಚಾರಣೆಯ ವೇಳೆ ಮಹಾಂತೇಶ್ ಮತ್ತು ಅಮೀರ್ ಅವರು ಪೊಲೀಸರೇ ಬೆಚ್ಚಿಬೀಳುವಂತಹ ಸಂಗತಿಯನ್ನು ಬಾಯಿಬಿಟ್ಟಿದ್ದಾರೆ. ಇನ್ಸೂರೆನ್ಸ್ ಹಣದ ಆಸೆಗೆ ಅಪರಿಚಿತ ಯುವಕನನ್ನು ಕೊಂದು ಅಪಘಾತದ ದೃಶ್ಯ ಸೃಷ್ಟಿಸಿದ್ದಾಗಿ ತಿಳಿಸಿದ್ದಾರೆ.

ಇನ್ಸೂರೆನ್ಸ್ ಕಂಪನಿಯೊಂದರಲ್ಲಿ ಸಂಜು ಐವತ್ತು ಲಕ್ಷ ರೂಪಾಯಿ ವಿಮೆ ಮಾಡಿಸಿದ್ದ. ತಾನು ಅಪಘಾತದಲ್ಲಿ ಸತ್ತಿರುವುದಾಗಿ ಬಿಂಬಿಸಿದರೆ ವಿಮಾ ಕಂಪನಿಯಿಂದ ಐವತ್ತು ಲಕ್ಷ ಹಣ ಬರುತ್ತೆ. ಆಗ ಎಲ್ಲರೂ ಸೇರಿ ದುಡ್ಡು ಹಂಚಿಕೊಂಡು ಮಜಾ ಉಡಾಯಿಸಬಹುದು ಎಂದು ಸ್ನೇಹಿತರಿಗೆ ತಿಳಿಸಿದ್ದ. ಹೀಗಾಗಿ ಮೂವರು ಸಂಚು ರೂಪಿಸಿ ಯುವಕನೊಬ್ಬನನ್ನು ಕರೆತಂದು ಸಂಜುನಂತೆ ಕಟಿಂಗ್ ಮಾಡಿಸಿ, ಬಟ್ಟೆ ಹಾಕಿದ್ದರು. ನಂತರ ಯುವಕನ ಕೊಲೆ ಮಾಡಿ ಅಪಘಾತವಾಗಿದೆ ಎಂಬಂತೆ ಬಿಂಬಿಸಿದ್ದರು.

ಕೊಲೆಗಡುಕರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲಿ ಕೆಳಗೆ ನುಸುಳಿ ಪ್ರಕರಣ ಭೇದಿಸಿದ್ದಾರೆ. ಸಂಜು ಸದ್ಯಕ್ಕೆ ನಾಪತ್ತೆಯಾಗಿದ್ದು ಆತನ ಬಂಧನಕ್ಕೆ ಬಲೆಬೀಸಿದ್ದಾರೆ. ಸಂಜು ಬೆಂಗೇರಿ ಬಂಧನದ ನಂತರವೇ ಕೊಲೆಯಾದ ಅಮಾಯಕ‌ ಯುವಕನ ಗುರುತು ಪತ್ತೆಯಾಗಲಿದ್ದು, ಕೊಲೆಯ ಕುರಿತು ಇನ್ನಷ್ಟು ಸತ್ಯಾಂಶಗಳು ಬಯಲಿಗೆ ಬರಲಿವೆ.

Comments are closed.