ಕರ್ನಾಟಕ

“ಒಬ್ಬ ವ್ಯಕ್ತಿ- ಒಂದು ಹುದ್ದೆ’: ಯಡಿಯೂರಪ್ಪ ಕೈ ತಪ್ಪಲಿರುವ ರಾಜ್ಯಾಧ್ಯಕ್ಷ ಸ್ಥಾನ?

Pinterest LinkedIn Tumblr


ಬೆಂಗಳೂರು: “ಒಬ್ಬ ವ್ಯಕ್ತಿ- ಒಂದು ಹುದ್ದೆ’ ಮಾನದಂಡಕ್ಕೆ ವಿರುದ್ಧವಾಗಿ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನದ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿರುವ ಬಗ್ಗೆ ದಿನ ಕಳೆದಂತೆ ಪಕ್ಷದಲ್ಲಿ ಆಂತರಿಕ ಬೇಗುದಿ ಹೆಚ್ಚುತ್ತಿದೆ.

ಇದರ ಬೆನ್ನಿಗೇ, ಹಿಂದುಳಿದ ವರ್ಗ ಅಥವಾ ಪರಿಶಿಷ್ಟ ಜಾತಿಯ ಹಾಗೂ ಸಂಘ ಪರಿವಾರದ ಗಟ್ಟಿ ಹಿನ್ನೆಲೆಯ ನಾಯಕರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು. ಹಾಗೂ “ಒಬ್ಬ ವ್ಯಕ್ತಿ-ಒಂದು ಹುದ್ದೆ’ ಮಾನದಂಡವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘ ಪರಿವಾರದಿಂದ ಸ್ಪಷ್ಟ ಸೂಚನೆಯೂ ಬಂದಿದ್ದು, ಹಲವು ನಾಯಕರ ಹೆಸರುಗಳು ಆ ಹುದ್ದೆಗೆ ಕೇಳಿಬರುತ್ತಿದೆ.

ಹಿಂದುಳಿದ ವರ್ಗದ ನಾಯಕರಾದ ಕೆ.ಎಸ್‌. ಈಶ್ವರಪ್ಪ, ಸಂಸದ ಪಿ.ಸಿ.ಮೋಹನ್‌, ವಿಧಾನಸಭೆಯ ಬಿಜೆಪಿ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಅವರ ಹೆಸರುಗಳು ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಕೇಳಿಬರುತ್ತಿದೆ. ಪರಿಶಿಷ್ಟ ಜಾತಿಯಿಂದ ಹಿರಿಯ ಶಾಸಕರಾದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಅವರನ್ನು ಪರಿಗಣಿಸಬಹುದು ಎಂಬ ಮಾಹಿತಿಯಿದೆ. ಉಳಿದಂತೆ ಒಕ್ಕಲಿಗ ಸಮುದಾಯವನ್ನು ಪರಿಗಣಿಸುವುದಾದರೆ, ಶಾಸಕ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ಅವರ ಹೆಸರುಗಳನ್ನು ಪರಿಗಣಿಸುವ ಸಾಧ್ಯತೆಯಿದೆ. ಜತೆಗೆ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವ ಬ್ರಾಹ್ಮಣ ವರ್ಗದ ಸಂಸದ ಅನಂತಕುಮಾರ್‌ ಹೆಗಡೆ, ಸಂಸದ ಪ್ರಹ್ಲಾದ್‌ ಜೋಷಿ ಅವರ ಹೆಸರುಗಳನ್ನೂ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

ಹಿಂದುಳಿದ ಮತಗಳ ಮೇಲೆ ಕಣ್ಣು
ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ, ಪಕ್ಷದ ಮತಬ್ಯಾಂಕ್‌ನ ಶೇ. 30ರಷ್ಟು ಪಾಲು ಹೊಂದಿರುವ ಹಿಂದುಳಿದ ವರ್ಗದವರ ವಿಶ್ವಾಸ ಉಳಿಸಿ, ಇನ್ನಷ್ಟು ವೃದ್ಧಿಸಲು ಬಿಜೆಪಿ ಉತ್ಸುಕವಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್‌ ನಿಂದ ಪರಿಶಿಷ್ಟ ಜಾತಿ-ಪಂಗಡದ ಮತಗಳನ್ನು ಬಿಜೆಪಿ ಕಡೆ ಸೆಳೆಯಲೂ ಆ ಸಮುದಾಯದ ನಾಯಕರನ್ನು ಪರಿಗಣಿಸುವ ಚಿಂತನೆಯೂ ನಡೆದಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಸಂಘದ ಹಿನ್ನೆಲೆಯ ಯುವ ಮುಖಂಡರನ್ನು ಗುರುತಿಸಲು ಸೂಚಿಸಿದ್ದಾರೆ ಎಂದೂ ಹೇಳಲಾಗಿದೆ.

ಆದರೆ ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಆತಂಕದ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆವರೆಗೆ ಯಡಿಯೂರಪ್ಪ ಅವರನ್ನೇ ಎರಡೂ ಸ್ಥಾನದಲ್ಲಿ ಮುಂದುವರಿಸುವ ಚಿಂತನೆಯೂ ನಡೆದಿದೆ ಎನ್ನಲಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಕಳೆದ ವಿಧಾನಸಭೆ ಚುನಾವಣೆ ಎದುರಿಸಿ 104 ಸ್ಥಾನ ಪಡೆದ ಬಿಜೆಪಿ ಪ್ರತಿಪಕ್ಷ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆಗ ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆಯಾದ ಯಡಿಯೂರಪ್ಪ ಅವರೇ ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಆಗ “ಒಬ್ಬ ವ್ಯಕ್ತಿ- ಒಂದು ಹುದ್ದೆ’ ಮಾನದಂಡದಂತೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

2019ರ ಚುನಾವಣೆ ನಂತರ ಬದಲಾವಣೆ?
ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿಯಿರುವ ಈ ಹೊತ್ತಿನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಸೂಕ್ತವೇ ಎಂಬ ಜಿಜ್ಞಾಸೆ ಪಕ್ಷದ ವರಿಷ್ಠರದು. ರಾಜ್ಯಾಧ್ಯಕ್ಷರ ಬದಲಾವಣೆಯಿಂದ ಪ್ರಮುಖ ಮತಬ್ಯಾಂಕ್‌ ಎನಿಸಿರುವ ಲಿಂಗಾಯಿತರು ಪಕ್ಷದಿಂದ ವಿಮುಖರಾದರೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವುದೇ ಎಂಬುದು ಹಿರಿಯ ನಾಯಕರ ಆತಂಕ. ಹಾಗಾಗಿ ಲೋಕಸಭಾ ಚುನಾವಣೆವರೆಗೆ ಅವರ ನೇತೃತ್ವದಲ್ಲೇ ಮುಂದುವರಿದು ನಂತರ ಈ ಬಗ್ಗೆ ನಿರ್ಧರಿಸಲು ಮುಖಂಡರು ಚಿಂತಿಸಿದ್ದಾರೆ ಎನ್ನಲಾಗಿದೆ.

ಮಾನದಂಡ ಪಾಲನೆಗೆ ಪರಿವಾರ ಒತ್ತು
ಇತರೆ ಪಕ್ಷಗಳಿಗಿಂತ ಭಿನ್ನ ನಿಲುವು, ಕಾರ್ಯ ವೈಖರಿಯ ಮೂಲಕವೇ ಶಿಸ್ತಿನ ಪಕ್ಷವೆಂದು ಗುರುತಿಸಿಕೊಂಡಿರುವ ಬಿಜೆಪಿಯ ಸತ್ಸಂಪ್ರದಾಯಗಳು ಮುಂದುವರಿಯಬೇಕು ಎಂಬುದು ಸಂಘ ಪರಿವಾರದ ಆಶಯ. ಅಧಿಕಾರಕ್ಕಿಂತ ಶಿಸ್ತು ಮುಖ್ಯ ಎಂಬ ತತ್ವವನ್ನು ಪರಿವಾರವು ಪ್ರಜ್ಞಾವಂತಿಕೆಯಿಂದಲೇ ಪಾಲಿಸುತ್ತಾ ಬಂದಿದೆ. ಅದರಂತೆ “ಒಬ್ಬ ವ್ಯಕ್ತಿ- ಒಂದು ಹುದ್ದೆ’ ಮಾನದಂಡ ಪ್ರತಿಯೊಬ್ಬರಿಗೂ ಅನ್ವಯವಾಗಲಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಪರಿವಾರ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.

Comments are closed.